ದುಬೈ: ಮಾರ್ಟಿನ್ ಗಪ್ಟಿಲ್ ಅರ್ಧಶತಕ, ಬೌಲಿಂಗ್‌ನಲ್ಲಿ ಟ್ರೆಂಟ್ ಬೌಲ್ಟ್, ಇಶ್ ಸೋಧಿ ಹಾಗೂ ಟಿಮ್ ಸೌಥಿ ಬೌಲಿಂಗ್ ದಾಳಿಯಿಂದ ನ್ಯೂಜಿಲೆಂಡ್ ತಂಡವು ಸ್ಕಾಟ್ಲೆಂಡ್ ವಿರುದ್ಧ 16 ರನ್‌ಗಳಿಂದ ಗೆದ್ದು ಬೀಗಿದೆ.
ಟಿ20 ವಿಶ್ವಕಪ್ ಟೂರ್ನಿಯ ಭಾಗವಾಗಿ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸ್ಕಾಟ್ಲೆಂಡ್ ನಾಯಕ ಕೈಲ್ ಕೋಟ್ಜರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ 5 ವಿಕೆಟ್ ನಷ್ಟಕ್ಕೆ 172 ರನ್ ದಾಖಲಿಸಿತ್ತು.
173 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಸ್ಕಾಟ್ಲೆಂಡ್ ತಂಡವು 5 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಲು ಶಕ್ತವಾಯಿತು. ತಂಡದ ಪರ ಮೈಕೆಲ್ ಲೀಸ್ಕ್ ಅಜೇಯ 42 ರನ್ (20 ಎಸೆತ, 3 ಬೌಂಡರಿ, 3 ಸಿಕ್ಸ್), ಮ್ಯಾಥ್ಯೂ ಕ್ರಾಸ್ 27 ರನ್ ಹಾಗೂ ಜಾರ್ಜ್ ಮುನ್ಸಿ 22 ರನ್ ಗಳಿಸಿದರು. ಇನ್ನು ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್, ಇಶ್ ಸೋಧಿ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು. ಇತ್ತ ಟಿಮ್ ಸೌಥಿ ನಾಲ್ಕು ಓವರ್ ಬೌಲಿಂಗ್ ಮಾಡಿ ಒಂದು ವಿಕೆಟ್ ಪಡೆದು 24 ರನ್ ನೀಡಿದರು. ಜೊತೆಗೆ ಎರಡು ಕ್ಯಾಚ್ ಪಡೆದು ಪ್ರಮುಖ ಆಟಗಾರರನ್ನು ಫೆವಿಲಿಯನ್‌ಗೆ ಅಟ್ಟಲು ತಂಡಕ್ಕೆ ಸಹಾಯಕವಾದರು.
ಇದಕ್ಕೂ ಮುನ್ನ ಕಿವೀಸ್ ಪರ ಮಾರ್ಟಿನ್ ಗಪ್ಟಿಲ್ 56 ಎಸೆತಗಳಲ್ಲಿ 93 ರನ್ (6 ಬೌಂಡರಿ, 7 ಸಿಕ್ಸ್) ಸಿಡಿಸಿದ್ದರು. ಇನ್ನು ಗ್ಲೆನ್ ಫಿಲಿಪ್ಸ್ 33 ರನ್ ಗಳಿಸಿದರೆ, ಡೇರಿಲ್ ಮಿಚೆಲ್ (13 ರನ್), ನಾಯಕ ಕೇನ್ ವಿಲಿಯಮ್ಸನ್ (0 ರನ್) ಹಾಗೂ ಡೆವೊನ್ ಕಾನ್ವೇ (1 ರನ್) ಬಹುಬೇಗ ವಿಕೆಟ್ ಒಪ್ಪಿಸಿ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದರು. ಇನ್ನು ಸ್ಕಾಟ್ಲೆಂಡ್ ಪರ ಬ್ರಾಡ್ ವೀಲ್, ಸಫ್ಯಾನ್ ಷರೀಫ್ ತಲಾ 2 ವಿಕೆಟ್ ಕಿತ್ತರೆ, ಮಾರ್ಕ್ ವ್ಯಾಟ್ ಒಂದು ವಿಕೆಟ್ ಉರುಳಿಸಿದ್ದರು.
PublicNext
03/11/2021 07:09 pm