ಅಬುಧಾಬಿ: ರೂಬೆನ್ ಟ್ರಂಪೆಲ್ಮನ್ ಅದ್ಭುತ ಬ್ಯಾಟಿಂಗ್ ಹಾಗೂ ಜೆಜೆ ಸ್ಮಿಟ್ ಉತ್ತಮ ಆಲ್ ರೌಂಡರ್ ಪ್ರದರ್ಶನದಿಂದ ನಮೀಬಿಯಾ ತಂಡವು ಸ್ಕಾಟ್ಲೆಂಡ್ ವಿರುದ್ಧ 4 ವಿಕೆಟ್‌ಗಳಿಂದ ರೋಚಕ ಗೆಲುವು ಸಾಧಿಸಿದೆ.
ಅಬುಧಾಬಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್‌ನ 21ನೇ ಪಂದ್ಯದಲ್ಲಿ ಟಾಸ್ ಗೆದ್ದ ನಮೀಬಿಯಾ ತಂಡ ಮೊದಲಿಗೆ ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ್ದ ಸ್ಕಾಟ್ಲೆಂಡ್ ಬ್ಯಾಟಿಂಗ್ ವೈಫಲ್ಯಕ್ಕೆ ಗುರಿಯಾಯಿತು. ಪರಿಣಾಮ 8 ವಿಕೆಟ್ ನಷ್ಟಕ್ಕೆ ಕೇವಲ 109 ರನ್ ಗಳಿಸಲು ಶಕ್ತವಾಗಿತ್ತು.
ಸಾಧಾರಣ ಟಾರ್ಗೆಟ್ ಬೆನ್ನತ್ತಿದ ನಮೀಬಿಯಾ 5 ಎಸೆತಗಳು ಬಾಕಿ ಇರುವಂತೆ 6 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿ ಜಯ ಗಳಿಸಿತು. ನಮೀಬಿಯಾ ಪರ ಜೆಜೆ ಸ್ಮಿಟ್ 32 ರನ್, ಕ್ರೇಗ್ ವಿಲಿಯಮ್ಸ್ 23 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಇದಕ್ಕೂ ಮುನ್ನ ನಮೀಬಿಯಾದ ರೂಬೆನ್ ಟ್ರಂಪೆಲ್ಮನ್ 3 ವಿಕೆಟ್ ಕಿತ್ತು ಮಿಂಚಿದರೆ, ಜೆಜೆ ಸ್ಮಿಟ್ 1 ವಿಕೆಟ್ ಪಡೆದಿದ್ದರು.
PublicNext
27/10/2021 11:07 pm