ಶಾರ್ಜಾ: ಮೊಹಮ್ಮದ್ ರಿಜ್ವಾನ್, ಶೋಯೆಬ್ ಮಲಿಕ್ ಉತ್ತಮ ಬ್ಯಾಟಿಂಗ್ ಹಾಗೂ ಕೊನೆಯಲ್ಲಿ ಆಸಿಫ್ ಅಲಿ ಅಬ್ಬರದ ಬ್ಯಾಟಿಂಗ್ ಸಹಾಯದಿಂದ ಪಾಕಿಸ್ತಾನ ತಂಡವು ನ್ಯೂಜಿಲ್ಯಾಂಡ್ ವಿರುದ್ಧ 5 ವಿಕೆಟ್‌ಗಳಿಂದ ರೋಚಕ ಗೆಲುವು ಸಾಧಿಸಿದೆ.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ 19ನೇ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ ತಂಡವು 8 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲು ಶಕ್ತವಾಗಿತ್ತು. 135 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನ ತಂಡವು 8 ಎಸೆತಗಳು ಬಾಕಿ ಇರುವಂತೆ 5 ವಿಕೆಟ್ ನಷ್ಟಕ್ಕೆ 135 ರನ್ ಚಚ್ಚಿ ಜಯ ಸಾಧಿಸಿದೆ.
ಪಾಕಿಸ್ತಾನದ ಪರ ಮೊಹಮ್ಮದ್ ರಿಜ್ವಾನ್ 33 ರನ್, ಶೋಯೆಬ್ ಮಲಿಕ್ 27 ರನ್ ಹಾಗೂ ಆಸಿಫ್ ಅಲಿ 27 ರನ್ ಗಳಿಸಿದರು. ಇನ್ನು ನ್ಯೂಜಿಲ್ಯಾಂಡ್ ಪರ ಇಶ್ ಸೋಧಿ 2 ವಿಕೆಟ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ ಹಾಗೂ ಟ್ರೆಂಟ್ ಬೌಲ್ಟ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಕೀವಿಸ್ ತಂಡದ ಪರ ಡ್ಯಾರಿಲ್ ಮಿಚೆಲ್ ಹಾಗೂ ಡೆವೊನ್ ಕಾನ್ವೇ ತಲಾ 27 ರನ್ ಗಳಿಸಿದರೆ, ನಾಯಕ ಕೇನ್ ವಿಲಿಯಮ್ಸನ್ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನುಳಿದ ಆಟಗಾರರು ಮೈದಾನಕ್ಕೆ ಇಳಿದಿದ್ದೇ ತಡ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದ್ದರು. ಇನ್ನು ಪಾಕಿಸ್ತಾನದ ಪರ ಹ್ಯಾರಿಸ್ ರೌಫ್ 4 ಬೌಲಿಂಗ್ ಮಾಡಿ ಕೇವಲ 22 ರನ್ ನೀಡಿ ಪ್ರಮುಖ 4 ವಿಕೆಟ್ ಉರುಳಿಸಿದ್ದರು. ಉಳಿದಂತೆ ಶಾಹೀನ್ ಶಾ ಆಫ್ರಿದಿ, ಇಮಾದ್ ವಾಸಿಮ್ ಹಾಗೂ ಮೊಹಮ್ಮದ್ ಹಫೀಜ್ ತಲಾ ಒಂದು ವಿಕೆಟ್ ಕಿತ್ತಿದ್ದರು.
PublicNext
26/10/2021 11:02 pm