ಶಾರ್ಜಾ: ನಜೀಬುಲ್ಲಾ ಜರ್ಧಾನ್ ಅರ್ಧಶತಕ, ಬಳಿಕ ಮುಜೀಬ್ ಉರ್ ರಹಮಾನ್ ಹಾಗೂ ರಸೀದ್ ಖಾನ್ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಸ್ಕಾಟ್ಲೆಂಡ್ ವಿರುದ್ಧ 130 ರನ್‌ಗಳಿಂದ ಭರ್ಜರಿ ಗೆದ್ದು ಬೀಗಿದೆ.
ಟಿ-20 ವಿಶ್ವಕಪ್ ಟೂರ್ನಿಯ ಭಾಗವಾಗಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡದ ನಾಯಕ ಮೊಹಮ್ಮದ್ ನಬಿ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ ತಂಡವು 4 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತ್ತು. 191 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಸ್ಕಾಟ್ಲೆಂಡ್ 10.2 ಓವರ್‌ಗಳಲ್ಲಿ ಸರ್ವಪತನ ಕಂಡು ಕೇವಲ 60 ರನ್ ಗಳಿಸಲು ಶಕ್ತವಾಯಿತು.
ಸ್ಕಾಟ್ಲೆಂಡ್ ಪರ ಆರಂಭಿಕ ಪರ ಆಟಗಾರ ಜಾರ್ಜ್ ಮನ್ಸೆ 25 ರನ್, ಕ್ರಿಸ್ ಗ್ರೀವ್ಸ್ 12 ರನ್ ಹಾಗೂ ನಾಯಕ ಕೈಲ್ ಕೊಯೆಟ್ಜರ್ 10 ರನ್ ಗಳಿಸಲು ಮಾತ್ರ ಶಕ್ತರಾದರು. ಉಳಿದಂತೆ ಎಲ್ಲ ಆಟಗಾರರು ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ಪರಿಣಾಮ ಸ್ಕಾಟ್ಲೆಂಡ್ ಬಹುಬೇಗ ಸರ್ವಪತನ ಕಂಡಿತು.
ಇನ್ನು ಅಫ್ಘಾನಿಸ್ತಾನ ಪರ ಮುಜೀಬ್ ಉರ್ ರಹಮಾನ್ 5 ವಿಕೆಟ್ ಕಿತ್ತು ಮಿಂಚಿದರೆ, ರಶೀದ್ ಖಾನ್ 4 ವಿಕೆಟ್ ಹಾಗೂ ನವೀನ್-ಉಲ್-ಹಕ್ 1 ವಿಕೆಟ್ ಕಿತ್ತು ತಂಡದ ಗೆಲುವು ತಂದುಕೊಟ್ಟರು.
ಇದಕ್ಕೂ ಮುನ್ನ ಅಫ್ಘಾನಿಸ್ತಾನ ಪರ ನಜೀಬುಲ್ಲಾ ಜರ್ಧಾನ್ 59 ರನ್, ಹಜರತುಲ್ಲಾ ಝಝಾಯಿ 44 ರನ್, ರಹಮಾನುಲ್ಲಾ ಗುರ್ಬಾಜ್ 46 ರನ್, ಹಾಗೂ ನಾಯಕ ಮೊಹಮ್ಮದ್ ನಬಿ ಅಜೇಯ 11 ರನ್ ಗಳಿಸಿದ್ದರು. ಇನ್ನು ಸ್ಕಾಟ್ಲೆಂಡ್ ಪರ ಸಫ್ಯಾನ್ ಷರೀಫ್ 2 ವಿಕೆಟ್ ಕಿತ್ತರೆ, ಜೋಶ್ ಡೇವಿ ಹಾಗೂ ಮಾರ್ಕ್ ವಾಟ್ ತಲಾ ಒಂದು ವಿಕೆಟ್ ಪಡೆದಿದ್ದರು.
PublicNext
25/10/2021 10:37 pm