ದುಬೈ: ಬಹುನಿರೀಕ್ಷಿತ ಟಿ-20 ವಿಶ್ವಕಪ್ ಟೂರ್ನಿ ಶುರುವಾಗಿದ್ದು, ಇಂದು ಸಂಜೆ 7.30ಕ್ಕೆ ಟೀಂ ಇಂಡಿಯಾ ಪಾಕಿಸ್ತಾನವನ್ನು ಎದುರಿಸಲಿದೆ. ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವದ ಕಣ್ಣು ಪಾಕ್ ವಿರುದ್ಧದ ಇಂಡಿಯಾ ಪಂದ್ಯದ ಮೇಲೆ ಬಿದ್ದಿದೆ.
ಎರಡು ವರ್ಷಗಳ ನಂತರ ಸಾಂಪ್ರದಾಯಿಕ ಎದುರಾಳಿ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲು ಸಜ್ಜಾಗಿವೆ. ವಿಶ್ವಕಪ್‌ನಂತಹ ಪ್ರಮುಖ ವೇದಿಕೆಯಲ್ಲಿ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನದ ವಿರುದ್ಧ ಅಜೇಯ ದಾಖಲೆ ಹೊಂದಿದ್ದು, ಈ ಗೆಲುವಿನ ಓಟ ಮುಂದುವರಿಸಲು ಟೀಂ ಇಂಡಿಯಾ ತುದಿಗಾಲಲ್ಲಿ ನಿಂತಿದೆ. ಮತ್ತೊಂದು ಕಡೆ ಪಾಕಿಸ್ತಾನ ಕೂಡ ಭಾರತದ ವಿರುದ್ಧ ಮೊದಲ ಗೆಲುವಿಗಾಗಿ ಹರಸಾಹಸ ಪಡಲಿದೆ.
ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದು, ಕಳೆದ 2019ರ ಏಕದಿನ ವಿಶ್ವಕಪ್‌ನಲ್ಲಿ. ರೋಹಿತ್ ಶರ್ಮಾ ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ಭಾರತ ಆ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಅಂತೆಯೇ ಭಾರತ ಹಾಗೂ ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಈವರೆಗೆ 5 ಬಾರಿ ಮುಖಾಮುಖಿಯಾಗಿದ್ದು, ಭಾರತ 4ರಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿದೆ. ಹೀಗಾಗಿ ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿಯೂ ಅಜೇಯ ಸಾಧನೆ ಮಾಡಿದೆ.
ಭಾರತದ ಬಲ: ಟೀಂ ಇಂಡಿಯಾ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದೆ. ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿದ್ದು, ಈ ಜೋಡಿ ತಂಡಕ್ಕೆ ಉತ್ತಮ ಆರಂಭ ಒದಗಿಸುವ ನಿರೀಕ್ಷೆ ಮೂಡಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಅಗ್ರ ಕ್ರಮಾಂಕದ ಬಲಿಷ್ಠ ಬ್ಯಾಟರ್ ಆಗಿದ್ದಾರೆ. ಮದ್ಯಮ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ರಂತಹ ಆಟಗಾರರು ಸ್ಫೋಟಕ ಆಟವಾಡಿ ಪಂದ್ಯದ ದಿಕ್ಕನೇ ಬದಲಿಸುವ ತಾಕತ್ತು ಹೊಂದಿದ್ದಾರೆ.
ಬೌಲಿಂಗ್‌ನಲ್ಲಿ ಆರ್.ಅಶ್ವಿನ್ ಟಿ20 ತಂಡಕ್ಕೆ ಮರಳಿರುವುದು ಆನೆಬಲ ಬಂದಂತಾಗಿದೆ. ಉಳಿದಂತೆ ಅನುಭವಿ ಬೌಲರ್‌ಗಳಾದ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ, ದೀಪಕ್ ಚಹರ್ ಲಯದಲ್ಲಿರುವುದು ತಂಡಕ್ಕೆ ಉತ್ತಮ ಸಂಗತಿ. ಅಂತೆಯೇ ರವೀಂದ್ರ ಜಡೇಜಾ, ಆರ್ ಅಶ್ವಿನ್ ಸ್ಪಿನ್ ಜೋಡಿ ನೆರವಾಗುತ್ತದೆ.
PublicNext
24/10/2021 07:25 am