ಚಿತ್ರದುರ್ಗ : ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಐದು ದಿನಗಳ ಕಾಲ ನಡೆಯಬೇಕಿದ್ದ ರಾಷ್ಟ್ರೀಯ ವಾಲಿಬಾಲ್ ಕ್ರೀಡಾ ಕೂಟವನ್ನು ರದ್ದುಗೊಳಿಸಲಾಗಿದೆ ಎಂದು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು. ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದ್ದು ಈ ಹಿನ್ನೆಲೆಯಲ್ಲಿ ಕ್ರೀಡಾ ಕೂಟವನ್ನು ಮುಂದೂಡಲಾಗಿದೆ ಎಂದು ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು ಶರಣ ಸಂಸ್ಕೃತಿ ಉತ್ಸವ ಹಾಗೂ ಮುರುಘಾ ಶರಣರ 30 ನೇ ಪಟ್ಟಾಧಿಕಾರದ ಕಾರ್ಯಕ್ರಮ ಅಂಗವಾಗಿ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಕ್ರೀಡಾ ಕೂಟಕ್ಕೆ ಸಂಬಂಧಪಟ್ಟಂತೆ ಎಲ್ಲ ಸಕಲ ಸಿದ್ಧತೆಗಳು ತಯಾರಿ ಮಾಡಿಕೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಆಟದ ಮೈದಾನ ಕೆಸರು ಗದ್ದೆಯಂತದಾಗಿದ್ದು, ಭಾರತೀಯ ವಾಲಿಬಾಲ್ ಫೆಡೆರೇಷನ್ ಸೂಚನೆಯಂತೆ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದರು. ಇದರಿಂದ ಕ್ರೀಡಾಪಟುಗಳಿಗೆ ಹಾಗೂ ಪ್ರೇಕ್ಷಕರಿಗೆ ಭಾರೀ ನಿರಾಸೆ ಮೂಡಿಸಿದೆ.
ಚಿತ್ರದುರ್ಗ ನಗರದಲ್ಲಿ ಹೆಚ್ಚು ಮಳೆ ಸುರಿದಿದ್ದು, ವಾಲಿಬಾಲ್ ಅಂಕಣ, ವೀಕ್ಷಕರ ಗ್ಯಾಲರಿ ಮತ್ತು ಮೈದಾನ ಪೂರ್ಣ ಪ್ರಮಾಣದಲ್ಲಿ ಹೆಚ್ಚು ತೆವಾಂಶ ಹೊಂದಿರುವ ಕಾರಣ ಕ್ರೀಡಾಕೂಟ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಶ್ರೀಗಳು ತಿಳಿಸಿದರು. ಈಗಾಗಲೇ ಹರಿಯಾಣ ಹಾಗೂ ಸಿಕ್ಕಿಂ ತಂಡಗಳು ಕರ್ನಾಟಕಕ್ಕೆ ಬರುತ್ತಿದ್ದರು ಎನ್ನಲಾಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹಲವು ಕ್ರೀಡಾಪಟುಗಳು ಟೂರ್ನಿಯಲ್ಲಿ ಭಾಗವಹಿಸಬೇಕಿತ್ತು. ವಾಲಿಬಾಲ್ ಕ್ರೀಡಾ ತಂಡಗಳು ಶುಕ್ರವಾರ ಚಿತ್ರದುರ್ಗ ಜಿಲ್ಲೆಗೆ ಆಗಮಿಸುವ ಸಾಧ್ಯತೆ ಇತ್ತು. ಮಳೆಯಿಂದಾಗಿ ಟೂರ್ನಿಗೆ ತೊಂದರೆ ಉಂಟಾಗಿದೆ. ಪ್ರಯಾಣ ಬೆಳೆಸಿದ್ದ ಕೆಲವು ತಂಡಗಳು ತಮ್ಮ ತಮ್ಮ ರಾಜ್ಯಕ್ಕೆ ವಾಪಸ್ ಮರಳಿವೆ ಎಂದು ತಿಳಿದು ಬಂದಿದೆ.
PublicNext
07/10/2021 10:56 pm