ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ, ಶ್ರೇಷ್ಠ ಬ್ಯಾಟರ್ ಇಂಜಮಾಮ್ ಉಲ್ ಹಕ್ ಅವರಿಗೆ ಲಘು ಹೃದಯಾಘಾತವಾಗಿದ್ದು, ಲಾಹೋರ್ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. 51ವರ್ಷದ ಇಂಜಮಾಮ್ ಉಲ್ ಹಕ್ಗೆ ಸದ್ಯ ಆಂಜಿಯೋಪ್ಲ್ಯಾಸ್ಟಿ ಮಾಡಲಾಗಿದ್ದು, ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಪಾಕ್ ಮಾಧ್ಯಮಗಳ ವರದಿಯ ಪ್ರಕಾರ, ಕಳೆದ ಮೂರು ದಿನಗಳಿಂದ ಇಂಜಮಾಮ್ ಉಲ್ ಹಕ್ ಅವರು ತಮಗೆ ಎದೆಯಲ್ಲಿ ನೋವು ಕಾಣಿಸಿಕೊಂಡ ಬಗ್ಗೆ ಹೇಳಿಕೊಂಡಿದ್ದರು. ಹೀಗಾಗಿ ಪರೀಕ್ಷೆಗೂ ಒಳಗಾಗಿದ್ದರು. ಆದರೆ ಪ್ರಾಥಮಿಕ ಪರೀಕ್ಷೆಯಲ್ಲಿ ಏನೂ ಸ್ಪಷ್ಟವಾಗಿರಲಿಲ್ಲ. ಆದರೆ ಸೋಮವಾರ ರಾತ್ರಿ ಇಂಜಮಾಮ್‌ಗೆ ಲಘು ಹೃದಯಾಘಾತಕ್ಕೆ ಒಳಗಾಗಿರುವುದು ಪರೀಕ್ಷೆಯಲ್ಲಿ ಖಚಿತವಾಗಿದ್ದು, ತಕ್ಷಣವೇ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂಜಮಾಮ್ ಉಲ್ ಹಕ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಕ್ರಿಕೆಟ್ ಅಭಿಮಾನಿಗಳು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಭಾರತದ ಕ್ರಿಕೆಟ್ ವಿಶ್ಲೇಷಕ, ಕಾಮೆಂಟೇಟರ್ ಹರ್ಷ ಬೋಗ್ಲೆ ಕೂಡ ಇಂಜಮಾಮ್ ಉಲ್ ಹಕ್ ಚೇತರಿಕೆಗಾಗಿ ಟ್ವೀಟ್ ಮೂಲಕ ಶುಭಹಾರೈಸಿದ್ದಾರೆ.
PublicNext
28/09/2021 02:23 pm