ಶಾರ್ಜಾ : ಅರ್ಧಕ್ಕೆ ನಿಂತಿದ್ದ ಐಪಿಎಲ್ 14 ನೇ ಆವೃತ್ತಿ ಮತ್ತೆ ಆರಂಭವಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಶಾರ್ಜಾದಲ್ಲಿ ನಡೆಯಲಿರುವ 35ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವಿಗಾಗಿ ಸೆಣಸಲಿದೆ.
ಎಂ.ಎಸ್. ಧೋನಿ ನೇತೃತ್ವದ ಸೂಪರ್ ಕಿಂಗ್ಸ್ 12 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, 5 ಗೆಲುವಿನೊಂದಿಗೆ 10 ಅಂಕ ಗಳಿಸಿರುವ ಆರ್ಸಿಬಿ ಮೂರನೇ ಸ್ಥಾನದಲ್ಲಿದೆ. ಆದರೆ, ದ್ವಿತಿಯಾರ್ಧದಲ್ಲಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿರುವುದು ಆರ್ ಸಿಬಿ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆಟಗಾರರಲ್ಲೂ ಆತ್ಮವಿಶ್ವಾಸ ಕುಗ್ಗಲು ಕಾರಣವಾಗಿರಬಹುದು. ಆದರೆ, ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಕೊಹ್ಲಿ ಪಡೆಗೆ ಇದೆ.
ಪ್ಲೇ ಆಫ್ ಗೆ ಆಯ್ಕೆಯಾಗಲು ಈ ಪಂದ್ಯದ ಗೆಲುವು ನಿರ್ಣಾಯಕ. ಇಲ್ಲದಿದ್ದರೆ, ಆರ್ ಸಿಬಿಯನ್ನು ಕೆಳೆಕ್ಕೆ ತಳ್ಳಿ ಮುಂಬೈ ಇಂಡಿಯನ್ಸ್ ಅಥವಾ ಕೋಲ್ಕತ್ತಾ ನೈಟ್ ರೈಡರ್ಸ್ ಅಂಕಪಟ್ಟಿಯಲ್ಲಿ ಮೇಲಕ್ಕೇರುವ ಸಾಧ್ಯತೆ ಇದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಸಹ ಬಲಿಷ್ಠವಾಗಿದ್ದು, ಇಂದಿನ ಪಂದ್ಯದ ಗೆಲುವು ಯಾರಿಗೆ? ಎಂಬುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಬ್ಯಾಟ್ಸ್ ಮನ್ ಗಳಾದ ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಮ್ಯಾಕ್ಸ್ವೆಲ್ ನೆಲಕಚ್ಚಿ ಆಡಿದರೆ ಚೆನ್ನೈ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.
ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಡೀ ಟೂರ್ನಿಯಲ್ಲೇ ಸಮತೋಲಿತ ತಂಡವಾಗಿ ಕಾಣುತ್ತಿದೆ. ಆರಂಭಿಕರಾದ ಫಾಫ್ ಡುಪ್ಲೆಸಿಸಿ ಮತ್ತು ರಿತುರಾಜ್ ಗಾಯಕ್ವಾಡ್ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಇನ್ನೂ ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ, ಅಂಬಾಟಿ ರಾಯ್ಡು ಮತ್ತು ಎಂ.ಎಸ್. ಧೋನಿ ಸಿಡಿದರೆ ಶಾರ್ಜಾ ಅಂಗಳದ ಮೂಲೆ ಮೂಲೆಗಳಿಗೂ ಚೆಂಡು ಹಾರುವುದು ಗ್ಯಾರಂಟಿ.
PublicNext
24/09/2021 01:41 pm