ಲಂಡನ್: ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ನೀಡುತ್ತಿರುವ ಅಮೋಘ ಪ್ರದರ್ಶನ ಮುಂದುವರಿದಿದೆ. ಓವಲ್ ಅಂಗಳದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಭಾರತ ಭರ್ಜರಿಯಾಗಿ ಗೆದ್ದು ಬೀಗಿದೆ. ಈ ಗೆಲುವಿನ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ನೆಲದಲ್ಲಿ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಈ ಮೂಲಕ ಮಾಜಿ ನಾಯಕ ಕಪಿಲ್ ದೇವ್ ಜೊತೆಗೆ ವಿಶೇಷ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿಯೊಂದರಲ್ಲಿ ಎರಡು ಜಯ ದಾಖಲಿಸಿದ ಎರಡನೇ ನಾಯಕ ಎಂಬ ಸಾಧನೆಯನ್ನು ಕೊಹ್ಲಿ ಮಾಡಿದ್ದಾರೆ. ಇದಕ್ಕೂ ಮುನ್ನ ಕಪಿಲ್‌ದೇವ್ ಮಾತ್ರವೇ ಈ ಸಾಧನೆಯನ್ನು ಮಾಡಿದ್ದರು. 1986ರಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ಇಂಗ್ಲೆಂಡ್ ನೆಲದಲ್ಲಿ 2-0 ಅಂತರದಿಂದ ಗೆಲ್ಲುವ ಮೂಲಕ ಕಪಿಲ್ ಮೊದಲ ಬಾರಿಗೆ ಈ ವಿಶೇಷ ಸಾಧನೆ ಮಾಡಿ ಬೀಗಿದ್ದರು.
1986ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ಗೆದ್ದ ಈ ಸರಣಿ ಟೆಸ್ಟ್ ಇತಿಹಾಸದಲ್ಲಿ ಇಂಗ್ಲೆಂಡ್ ನೆಲದಲ್ಲಿ ಗೆದ್ದ ಎರಡನೇ ಟೆಸ್ಟ್ ಸರಣಿ ಗೆಲುವು ಎಂಬುದು ವಿಶೇಷ. ಇದಕ್ಕೂ ಮುನ್ನ 1971ರಲ್ಲಿ ಭಾರತ ಮೊದಲ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿತ್ತು. ಈ ಸರಣಿಯಲ್ಲಿಯೇ ಓವಲ್ ಮೈದಾನದಲ್ಲಿ ಭಾರತ ಮೊದಲ ಬಾರಿಗೆ ಪಂದ್ಯವನ್ನು ಗೆದ್ದ ಸಾಧನೆ ಮಾಡಿತ್ತು. ಈ ಗೆಲುವಿಗೆ ಸರಿಯಾಗಿ 50 ವರ್ಷ 13 ದಿನಗಳ ನಂತರ ಮತ್ತೆ ಓವಲ್ ಅಂಗಳದಲ್ಲಿ ಗೆಲುವುಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದೆ.
PublicNext
07/09/2021 07:22 am