ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಂದು (ಬುಧವಾರ) ನಡೆದ ಮಹಿಳಾ ಹಾಕಿ ಸೆಮಿಫೈನಲ್‌ನಲ್ಲಿ ಭಾರತ ತಂಡವು ಅರ್ಜೆಂಟೀನಾ ವಿರುದ್ಧ 1-2 ಗೋಲುಗಳ ಅಂತರದ ಸೋಲು ಅನುಭವಿಸಿದೆ. ಇದರೊಂದಿಗೆ ಫೈನಲ್‌ಗೆ ಪ್ರವೇಶಿಸುವಲ್ಲಿ ವಿಫಲವಾಗಿದೆ.
ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತದ ಮಹಿಳಾ ಹಾಕಿ ತಂಡವು ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿತ್ತು. ಕ್ವಾರ್ಟರ್‌ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದ ರಾಣಿ ರಾಂಪಾಲ್ ಪಡೆಯು ಪದಕ ಸುತ್ತಿಗೆ ಪ್ರವೇಶಿಸಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ ಭಾರತ ತಂಡವು ಫೈನಲ್ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಆದರೂ ಪದಕ ಗೆಲ್ಲಲು ಭಾರತಕ್ಕೆ ಮತ್ತೊಂದು ಅವಕಾಶವಿದೆ.
ಹೌದು. ಭಾರತವು ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಕಂಚಿನ ಪದಕಕ್ಕಾಗಿ ಗ್ರೇಟ್ ಬ್ರಿಟನ್ ವಿರುದ್ಧ ಸೆಣಸಲಿದೆ. ಅತ್ತ ಶುಕ್ರವಾರ ಅರ್ಜೆಂಟೀನಾ ಹಾಗೂ ನೆದರ್ಲೆಂಡ್ಸ್ ಚಿನ್ನದ ಪದಕಕ್ಕಾಗಿ ಕಾದಾಡಲಿವೆ.
PublicNext
04/08/2021 05:34 pm