ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಥ್ರೋ (ಈಟಿ ಎಸೆತ) ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಭರವಸೆಯ ಅಥ್ಲೀಟ್ ನೀರಜ್ ಚೋಪ್ರಾ ತಮ್ಮ ಮೊದಲ ಪ್ರಯತ್ನದಲ್ಲೇ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಚೋಪ್ರಾ 86.65 ಮೀಟರ್ ಸಾಧನೆಯೊಂದಿಗೆ ಫೈನಲ್ ಹಂತಕ್ಕೆ ನೇರ ಪ್ರವೇಶ ಪಡೆದುಕೊಂಡಿದ್ದಾರೆ. ಅಥ್ಲೆಟಿಕ್ಸ್ ವಿಭಾಗದ ಪುರುಷರ ಜಾವೆಲಿನ್ ಥ್ರೋನಲ್ಲಿ ಚೋಪ್ರಾ ಗ್ರೂಪ್ 'ಎ'ಯಲ್ಲಿದ್ದಾರೆ.
ಮಂಗಳವಾರ ನಡೆದ ಗ್ರೂಪ್ ಹಂತದ ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲೇ ಫೈನಲ್‌ಗೆ ನೇರ ಪ್ರವೇಶ ಪಡೆದುಕೊಂಡಿದ್ದಾರೆ. ಈ ವೇಳೆ ವಿಶ್ವ ನಂ.1 ಜಾವೆಲಿನ್ ಥ್ರೋವರ್ ಜರ್ಮನಿಯ ಜೋಹಾನ್ಸ್ ವೆಟರ್ ಮೊದಲ ಪ್ರಯತ್ನದಲ್ಲಿ 82.04 ಮೀಟರ್ ಸಾಧನೆ ತೋರಿದ್ದಾರೆ.
ಇದೇ ಚೊಚ್ಚಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ನೀರಜ್ ಮೊದಲ ಪ್ರಯತ್ನದಲ್ಲೇ ಫೈನಲ್‌ಗೆ ಪ್ರವೇಶದ ಸಾಧನೆ ತೋರಿರುವುದು ದೇಶಕ್ಕೆ ಪದಕದ ಆಸೆ ಮೂಡಿಸಿದೆ. ವಿಶ್ವ ಖ್ಯಾತಿಯ ಜೋಹಾನ್ಸ್ ವೆಟರ್ ದ್ವಿತೀಯ ಪ್ರಯತ್ನದಲ್ಲಿ 82.08 ಮೀಟರ್ ಮತ್ತು ತೃತೀಯ ಪ್ರಯತ್ನದಲ್ಲಿ 85.64 ಮೀಟರ್ ದೂರದ ಸಾಧನೆ ತೋರಿದ್ದಾರೆ. ಫೈನಲ್ ಹಂತಕ್ಕೆ ವೆಟರ್ ಕೂಡ ಪ್ರವೇಶ ಪಡೆದುಕೊಂಡಿದ್ದಾರೆ.
ಜರ್ಮನಿಯ ವಿಶ್ವ ನಂ.1 ಥ್ರೋವರ್ ವೆಟರ್ ಅವರ ವೈಯಕ್ತಿಕ ಅತ್ಯುತ್ತಮ ಸಾಧನೆಯೆಂದರೆ 97.76 ಮೀಟರ್. ನೀರಜ್ ಚೋಪ್ರಾ ಅವರ ವೈಯಕ್ತಿಕ ಅತ್ಯುತ್ತಮ ಸಾಧನೆ 88.07 ಮೀಟರ್. ಹೀಗಾಗಿ ಫೈನಲ್‌ನಲ್ಲಿ ಚೋಪ್ರಾ ಮತ್ತು ವೆಟರ್ ಮಧ್ಯೆ ಉತ್ತಮ ಪೈಪೋಟಿ ನಡೆಯುವ ನಿರೀಕ್ಷೆಯಿದೆ.
PublicNext
04/08/2021 08:53 am