ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಗಾಯಾಳು ಸಮಸ್ಯೆ ಕಾಡುತ್ತಿದೆ. ಈಗಾಗಲೇ ಗಾಯದ ಕಾರಣ ತಂಡದಿಂದ 6 ಆಟಗಾರರು ಹೊರಗುಳಿದಿದ್ದಾರೆ.
ನಾಲ್ಕನೇ ಟೆಸ್ಟ್ ಗಬ್ಬಾ ಕ್ರೀಡಾಂಗಣದಲ್ಲಿ ಜನವರಿ 15ರಿಂದ ಆರಂಭವಾಗಲಿದೆ. ಕಳೆದ ಮೂರು ಪಂದ್ಯಗಳಲ್ಲಿ ಒಂದು ಡ್ರಾ ಆಗಿದ್ದು, ಉಳಿದಂತೆ ತಲಾ ಒಂದು ಪಂದ್ಯದಲ್ಲಿ ಗೆದ್ದಿರುವ ಭಾರತ- ಆಸ್ಟ್ರೇಲಿಯಾ ತಂಡಗಳು 1-1 ಸಮಬಲ ಸಾಧಿಸಿವೆ. ಹೀಗಾಗಿ ಕೊನೆಯ ಟೆಸ್ಟ್ ಪಂದ್ಯವು ಫೈನಲ್ ಕದನವಾಗಿ ಮಾರ್ಪಟ್ಟಿದೆ. ಆದರೆ ಇತ್ತ ಅಂತಿಮ ಹಣಾಹಣಿಗೆ ಟೀಂ ಇಂಡಿಯಾ ಆಡುವ ಬಳಗವನ್ನು ರೂಪಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಮಧ್ಯದಲ್ಲಿ ಮೊಹಮ್ಮದ್ ಶಮಿ, ಉಮೇಶ್ ಯಾದವ್, ಕೆ.ಎಲ್.ರಾಹುಲ್ ಗಾಯಗೊಂಡು ಹೊರನಡೆದರೆ, ಇದೀಗ 3ನೇ ಟೆಸ್ಟ್ ಪಂದ್ಯದ ವೇಳೆ ರವೀಂದ್ರ ಜಡೇಜಾ, ಹನುಮ ವಿಹಾರಿ ಹಾಗೂ ಜಸ್ಪ್ರೀತ್ ಬುಮ್ರಾ ಗಾಯಗೊಂಡಿದ್ದಾರೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಈ ಮೂವರು ಆಟಗಾರರು ಕಣಕ್ಕಿಳಿಯುವುದು ಅನುಮಾನ.
ಈ ಬಗ್ಗೆ ಟ್ವೀಟ್ ಮಾಡಿರುವ ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್, ''6 ಆಟಗಾರರು ಗಾಯಗೊಂಡಿದ್ದಾರೆ. 11 ಆಟಗಾರರ ತಂಡ ರೂಪಿಸಲು ಸಾಧ್ಯವಾಗದಿದ್ದರೆ, ನಾನು ಆಸ್ಟ್ರೇಲಿಯಾಕ್ಕೆ ಹೋಗಲು ಸಿದ್ಧ. ಕ್ವಾರಂಟೈನ್ ವ್ಯವಸ್ಥೆ ಮಾಡ್ತೀರಾ'' ಎಂದು ಬಿಸಿಸಿಐಯನ್ನು ಕೇಳಿದ್ದಾರೆ.
ಸೆಹ್ವಾಗ್ ಮಾಡಿರುವ ಈ ತಮಾಷೆಯ ಟ್ವೀಟ್ ಇದೀಗ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳು ಸಹ ವೀರು ಅವರು ಕಂಬ್ಯಾಕ್ ಮಾಡಿ. ನೀವಿದ್ದರೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವು ಗ್ಯಾರೆಂಟಿ ಎನ್ನುತ್ತಿದ್ದಾರೆ.
PublicNext
12/01/2021 10:29 pm