ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಕ್ರಿಕೆಟ್ ಗ್ರೌಂಡ್ (ಎಸ್‌ಸಿಜಿ) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ಆಟಗಾರರ ವಿರುದ್ಧ ಪ್ರೇಕ್ಷಕರು ಜನಾಂಗೀಯ ನಿಂದನೆ ಮಾಡಿರುವುದು ಭಾರೀ ಟೀಕೆಗೆ ಕಾರಣವಾಗಿದೆ. ಈ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್‌ಗಳಾದ ಮೈಕ್ ಹಸ್ಸಿ ಮತ್ತು ಶೇನ್ ವಾರ್ನ್ ಕಟುವಾಗಿ ಟೀಕಿಸಿದ್ದಾರೆ.
ಫಾಕ್ಸ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಮೈಕ್ ಹಸ್ಸಿ, "ಟೀಂ ಇಂಡಿಯಾ ವೇಗದ ಬೌಲರ್‌ಗಳಾದ ಜಸ್‌ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಅವರಿಗೆ ಜನಾಂಗೀಯ ನಿಂದನೆ ಮಾಡಿರುವುದು ಅಸಹನೀಯ ವರ್ತನೆ. ಈ ಕಾಲದಲ್ಲೂ ಹೀಗೆ ಮಾಡುತ್ತಿರುವುದನ್ನು ನಂಬಲು ಸಾಧ್ಯವಾಗದೇ ಇರುವುದು. ಅವರನ್ನು ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಕ್ರೀಡಾಂಗಣಕ್ಕೆ ಬರದೇ ಇರುವಂತೆ ಆಜೀವ ನಿಷೇಧ ಹೇರಬೇಕು. ಟೀಂ ಇಂಡಿಯಾ ಇಲ್ಲಿಗೆ ಬಂದಿರುವುದು ನಮಗೆ ಮನೋರಂಜನೆ ನೀಡಲು. ಅದ್ಭುತ ಕ್ರಿಕೆಟ್ ಆಡಲು. ಹೀಗಾಗಿ ಆ ತಂಡದ ಬಗ್ಗೆ ನಮಗೆ ಗೌರವ ಇರಬೇಕು. ಆಟಗಾರರ ವಿರುದ್ಧ ಈ ರೀತಿಯ ವರ್ತನೆ ಸಹಿಸಲು ಸಾಧ್ಯವಿಲ್ಲ" ಎಂದು ಅಸಮಾಧಾನ ಹೊರಹಾಕಿದ್ದಾರೆ.
ಶೇನ್ ವಾರ್ನ್ ಕೂಡ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು, "ಇದು ಅಗೌರವ ಸೂಚಿಸುವಂಥದ್ದು. ಈ ರೀತಿಯ ಘಟನೆಗಳು ನಡೆಯಬಾರದು. ಕಳೆದ 12 ತಿಂಗಳಲ್ಲಿ ಜಗತ್ತಿನಲ್ಲಿ ಏನೆಲ್ಲಾ ನಡೆದಿದೆ. ಈ ರೀತಿ ನಡೆದುಕೊಂಡಿರುವವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗಳ್ಳಬೇಕಿದೆ. ತಪ್ಪಿತಸ್ಥರನ್ನು ಕೂಡಲೇ ಪತ್ತೆ ಮಾಡಬೇಕಿದೆ" ಎಂದು ಹೇಳಿದ್ದಾರೆ.
PublicNext
10/01/2021 09:47 am