ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಸಂದರ್ಭ ಟೀಂ ಇಂಡಿಯಾದ ವೇಗದ ಬೌಲರ್‌ಗಳಾದ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಅವರಿಗೆ ಪ್ರೇಕ್ಷಕನೊಬ್ಬ ಜನಾಂಗೀಯ ನಿಂದನೆ ಮಾಡಿದ್ದಾನೆ. ಈ ಸಂಬಂಧ ಐಸಿಸಿ ಮ್ಯಾಚ್ ರೆಫರಿ ಡೇವಿಡ್ ಬೂನ್ ಅವರಿಗೆ ಬಿಸಿಸಿಐ ದೂರು ನೀಡಿದೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಶನಿವಾರ ನಡೆದ ತೃತೀಯ ಟೆಸ್ಟ್‌ನ ಮೂರನೇ ದಿನದಾಟದ ವೇಳೆ ಕುಡಿದ ಮತ್ತಿನಲ್ಲಿದ್ದ ಪ್ರೇಕ್ಷಕನೊಬ್ಬ ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದಾನೆ. ಕೂಡಲೇ ತಂಡ ನಿರ್ವಹಣಾ ಸಮಿತಿ ಈ ಬಗ್ಗೆ ಅಧಿಕೃತ ದೂರು ನೀಡಿದೆ ಎಂದು ತಿಳಿದು ಬಂದಿದೆ.
ಬಿಸಿಸಿಐ ಮೂಲಗಳ ಪ್ರಕಾರ, ಸಿಡ್ನಿ ಕ್ರೀಡಾಂಗಣದ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಪ್ರೇಕ್ಷಕನೊಬ್ಬ ಮೊಹಮ್ಮದ್ ಸಿರಾಜ್ ಅವರನ್ನು ‘ಕೋತಿ’ ಎಂದು ನಿಂದಿಸಿದ್ದಾನೆ. ಈ ಘಟನೆ 2007–08ರಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಸಂದರ್ಭ ನಡೆದಿದ್ದ ಮಂಕಿಗೇಟ್ ಎಪಿಸೋಡ್ ಅನ್ನು ಮತ್ತೆ ನೆನಪಿಸಿದೆ.
PublicNext
09/01/2021 08:51 pm