ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ರಾಷ್ಟ್ರಗೀತೆ ವೇಳೆ ಭಾರತದ ಬಲಗೈ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಭಾವುಕರಾದರು.
ಸಿರಾಜ್ ಭಾರತದ ಪರ ಆಡುವುದು ಅಪ್ಪ ಮೊಹಮ್ಮದ್ ಗೌಸ್ ಅವರ ಬಹುದೊಡ್ಡ ಕನಸಾಗಿತ್ತು.
ಸದ್ಯ ಮಗ ಅಪ್ಪನ ಕನಸ್ಸು ನನಸಾಗಿಸುತ್ತಿದ್ದಾರೆ ಆದರೆ ಸಂಭ್ರಮಿಸಲು ಅಪ್ಪನೇ ಇಲ್ಲ .
ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದ ಸಿರಾಜ್, ರಾಷ್ಟ್ರಗೀತೆ ವೇಳೆಯಲ್ಲಿ ಅತ್ಯಂತ ಭಾವುಕರಾಗಿ ಕಂಡುಬಂದಿದ್ದರಲ್ಲದೆ ಆನಂದ ಭಾಷ್ಪವನ್ನು ಸುರಿಸಿದರು.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪಿತೃವಿಯೋಗದ ದುಃಖದಲ್ಲಿರುವ ಭಾರತ ಮೊಹಮ್ಮದ್ ಸಿರಾಜ್, ರಾಷ್ಟ್ರೀಯ ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಟೀಮ್ ಇಂಡಿಯಾ ಜೊತೆಗೆ ಆಸ್ಟ್ರೇಲಿಯಾದಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದರು.
ಅಲ್ಲದೆ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಡೆಬ್ಯು ಮಾಡಿದ್ದರಲ್ಲದೆ ಪಂದ್ಯದಲ್ಲಿ ಒಟ್ಟು ಐದು ವಿಕೆಟ್ಗಳನ್ನು ಕಬಳಿಸುವ ಮೂಲಕ ಗಮನ ಸೆಳೆದಿದ್ದರು.
ಈ ಮೂಲಕ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಕಳೆದ ನವೆಂಬರ್ ತಿಂಗಳಲ್ಲಿ ಸಿರಾಜ್ ತಂದೆ ಮೊಹಮ್ಮದ್ ಗೌಸ್ ನಿಧನರಾದರು.
ರಿಕ್ಷಾ ಚಾಲಕರಾಗಿದ್ದ ಅವರು ಮಗನ ಕ್ರಿಕೆಟ್ ಭವಿಷ್ಯ ರೂಪಿಸಲು ಬಹಳಷ್ಟು ಶ್ರಮಿಸಿದ್ದರು.
PublicNext
07/01/2021 09:52 am