ಮೆಲ್ಬರ್ನ್: ಆಸ್ಟ್ರೇಲಿಯಾ ತಂಡದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಏಟಿಗೆ ಎದಿರೇಟು ನೀಡಿದೆ. ಮೆಲ್ಬರ್ನ್ ಮೈದಾನದಲ್ಲಿ ಎಂಟು ವಿಕೆಟ್ ಅಂತರದ ಗೆಲವು ಸಾಧಿಸಿದ ರಹಾನೆ ಪಡೆ ಸರಣಿಯಲ್ಲಿ ಸಮಬಲ ಸಾಧಿಸಿದೆ.
ಗೆಲುವಿಗೆ 70 ರನ್ ಗುರಿ ಪಡೆದ ಟೀಂ ಇಂಡಿಯಾ ಎರಡು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆರಂಭದಲ್ಲೇ ಮಯಾಂಕ್ ಅಗರ್ವಾಲ್ ಮತ್ತು ಚೇತೇಶ್ವರ ಪೂಜಾರ ವಿಕೆಟ್ ಕಳೆದುಕೊಂಡ ಭಾರತಕ್ಕೆ ಶುಭ್ಮನ್ ಗಿಲ್ (35 ರನ್) ಮತ್ತು ನಾಯಕ ಅಜಿಂಕ್ಯ ರಹಾನೆ (27 ರನ್) ಆಧರಿಸಿದರು.
ಆರು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದ್ದಲ್ಲಿಂದ ನಾಲ್ಕನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಗ್ರೀನ್ ಮತ್ತು ಕಮಿನ್ಸ್ ನೆರವಾದರು. ಗ್ರೀನ್ 45 ರನ್ ಮತ್ತು ಕಮಿನ್ಸ್ ಉಪಯುಕ್ತ 22 ರನ್ ಗಳಿಸಿದರು. ಸ್ಟಾರ್ಕ್ 14 ಮತ್ತು ಹ್ಯಾಜಲ್ ವುಡ್ 10 ರನ್ ಗಳಿಸಿದರು.
ಪೇನ್ ಪಡೆ 200 ರನ್ ಗೆ ಆಲ್ ಔಟ್ ಆಗುವ ಮೂಲಕ ಭಾರತಕ್ಕೆ 70 ರನ್ ಗುರಿ ನೀಡಿತು. ಸಿರಾಜ್ ಮೂರು ವಿಕೆಟ್, ಬುಮ್ರಾ, ಅಶ್ವಿನ್, ಜಡೇಜಾ ತಲಾ ಎರಡು ವಿಕೆಟ್ ಪಡೆದರು. ಒಂದು ವಿಕೆಟ್ ಉಮೇಶ್ ಯಾದವ್ ಪಡೆದರು.
ಮೊದಲ ಇನ್ನಿಂಗ್ಸ್ ಆಡಿದ ಆಸೀಸ್ ಪಡೆ 195 ರನ್ ಗಳಿಸಿತ್ತು. ಅಜಿಂಕ್ಯ ರಹಾನೆ ಶತಕದ ನೆರವಿನಿಂದ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 326 ರನ್ ಗಳಿಸಿತ್ತು. ದ್ವಿತೀಯ ಇನ್ನಿಂಗ್ಸ್ ನಲ್ಲಿ 200 ರನ್ ಗಳಿಸಿದ ಆಸೀಸ್ ಭಾರತಕ್ಕೆ 70 ರನ್ ಗುರಿ ನೀಡಿತ್ತು. ಎರಡು ವಿಕೆಟ್ ನಷ್ಟಕ್ಕೆ ಟೀಂ ಇಂಡಿಯಾ ಈ ಗುರಿ ತಲುಪಿದೆ.
PublicNext
29/12/2020 09:55 am