ದುಬೈ: ಕನ್ನಡಿಗ ದೇವದತ್ ಪಡಿಕ್ಕಲ್, ಎಬಿ ಡಿವಿಲಿಯರ್ಸ್ ಹಾಗೂ ಆರೋನ್ ಫಿಂಚ್ ಅವರ ಅರ್ಧಶಕತದ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್‌ಗೆ 202 ರನ್‌ಗಳ ಗುರಿ ನೀಡಿದೆ.
ದುಬೈನಲ್ಲಿ ಇಂದು ನಡೆಯುತ್ತಿರುವ ಐಪಿಎಲ್ನ 10ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ದೇವದತ್ ಪಡಿಕ್ಕಲ್ 54 ರನ್ (40 ಎಸೆತ, 5 ಬೌಂಡರಿ, 2 ಸಿಕ್ಸರ್), ಆರೋನ್ ಫಿಂಚ್ 52 ರನ್ (35 ಎಸೆತ, 7 ಬೌಂಡರಿ, 1 ಸಿಕ್ಸ್) ಹಾಗೂ ಎಬಿ ಡಿವಿಲಿಯರ್ಸ್ ಔಟಾಗದೆ 55 ರನ್ ( 24 ಎಸೆತ, 4 ಬೌಂಡರಿ, 4 ಸಿಕ್ಸರ್) ಸಹಾಯದಿಂದ 3 ವಿಕೆಟ್ ನಷ್ಟಕ್ಕೆ 201 ರನ್ ಪೇರಿಸಿದೆ.
ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಆರ್‌ಸಿಬಿ ಓಪನರ್ಗಳಾದ ದೇವದತ್ ಪಡಿಕ್ಕಲ್ ಹಾಗೂ ಆರೋನ್ ಫಿಂಚ್ ಉತ್ತಮ ಆರಂಭ ಒದಗಿಸಿದರು. ಪವರ್ಪ್ಲೇ ನಲ್ಲಿ ಆರ್‌ಸಿಬಿ ಮೊತ್ತ ವಿಕೆಟ್ ನಷ್ಟವಿಲ್ಲದೆ 59 ಬಂದು ನಿಂತಿತು. ಪವರ್ ಪ್ಲೇ ಬಳಿಕ ಕೂಡ ಬಿರುಸಿನ ಆಟ ಮುಂದುವರೆಸಿದ ಫಿಂಚ್ 31 ಎಸೆತಗಳಲ್ಲಿ ಐಪಿಎಲ್ನಲ್ಲಿ ತಮ್ಮ 14ನೇ ಅರ್ಧಶತಕ ಪೂರೈಸಿದರು. ಈ ಸ್ಪೋಟಕ ಇನಿಂಗ್ಸ್ನಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ್ದರು. ಆದರೆ ಹಾಫ್ ಸೆಂಚುರಿ ಬಳಿಕ ಕೇವಲ 2 ರನ್ ಗಳಿಸಿದ ಫಿಂಚ್ ಬೌಲ್ಟ್ ಎಸೆತದಲ್ಲಿ ಪೊಲಾರ್ಡ್ಗೆ ಕ್ಯಾಚ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು.
ಫಿಂಚ್ ವಿಕೆಟ್ ಬಳಿಕ ರನ್ ಏರಿಕೆ ನಿಧಾನಗತಿಗೆ ಸಾಗಿತು. 11 ಎಸೆತಗಳನ್ನು ಎದುರಿಸಿದ ನಾಯಕ ವಿರಾಟ್ ಕೊಹ್ಲಿ ಕೇವಲ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಜೊತೆಯಾದ ಎಬಿಡಿ - ಪಡಿಕ್ಕಲ್ ಉತ್ತಮ ಆಟ ಪ್ರದರ್ಶಿಸಿದರು. ಪಡಿಕ್ಕಲ್ 37 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ ಐಪಿಎಲ್ನ 2ನೇ ಅರ್ಧಶತಕ ಪೂರೈಸಿದರು. ಅಲ್ಲದೆ ತಂಡದ ಮೊತ್ತವನ್ನು 16 ಓವರ್ಗಳಲ್ಲಿ 136 ರನ್‌ಗೆ ತಂದು ನಿಲ್ಲಿಸಿದರು.
ಕೊನೆಯ ನಾಲ್ಕು ಓವರ್ಗಳಿರುವಾಗ ಎಬಿಡಿಯ ಸಿಡಿಲಬ್ಬರ ಕೂಡ ಶುರುವಾಯಿತು. ಅದರಂತೆ ಬುಮ್ರಾ ಅವರ 17ನೇ ಓವರ್ನಲ್ಲಿ ಸಿಕ್ಸ್-ಫೋರ್ಗಳನ್ನು ಬಾರಿಸುವ ಮೂಲಕ 18 ರನ್ ಕಲೆಹಾಕಿದರು. ಆದರೆ 18ನೇ ಓವರ್ನ ಮೊದಲ ಎಸೆತದಲ್ಲೇ ಪಡಿಕ್ಕಲ್ (54 ರನ್) ಬೌಲ್ಟ್ಗೆ ವಿಕೆಟ್ ಒಪ್ಪಿಸಿದರು. ಶಿವಂ ದುಬೆ ಹಾಗೂ ಎಬಿಡಿ ಕೊನೆಯ ಎರಡು ಓವರಿನಲ್ಲಿ 37 ರನ್ ಚಚ್ಚಿದರು. ಇದರಿಂದಾಗಿ ತಂಡದ ಮೊತ್ತವು 201 ರನ್‌ಗೆ ತಲುಪಿತು.
PublicNext
28/09/2020 09:21 pm