ಶಾರ್ಜಾ: ಆರಂಭಿಕ ಪಂದ್ಯದಲ್ಲಿ ಗೆದ್ದು ಬೀಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 16 ರನ್‌ಗಳಿಂದ ಸೋಲು ಕಂಡಿದೆ.
ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಸಿಎಸ್‌ಕೆ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿ ಸೋಲು ಕಂಡಿದೆ. ಆರ್‌ಆರ್ ನೀಡಿದ್ದ 217 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿತು. ಆದರೆ ಏಳನೇ ಓವರಿನಲ್ಲಿ ಶೇನ್ ವಾಟ್ಸನ್ (33 ರನ್) ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಮುರುಳಿ ವಿಜಯ್ (21 ರನ್), ಸ್ಯಾಮ್ ಕುರ್ರನ್ (17 ರನ್), ಋತುರಾಜ್ ಗಾಯಕ್ವಾಡ್ (0 ರನ್) ಹಾಗೂ ಕೇದಾರ್ ಜಾಧವ್ (22 ರನ್) ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು.
ಈ ಮಧ್ಯೆ ಏಕಾಂಗಿಯಾಗಿ ಹೋರಾಡುತ್ತಿದ್ದ ಫಾಪ್ ಡುಪ್ಲೆಸಿಸ್‌ಗೆ ನಾಯಕ ಎಂ.ಎಸ್.ಧೋನಿ ಸಾಥ್ ನೀಡಿದ್ದರು. ಈ ಜೋಡಿ 6ನೇ ವಿಕೆಟ್ ನಷ್ಟಕ್ಕೆ 65 ರನ್ ಕಲೆಹಾಕಿತು. ಆದರೆ ಬೀರುಸಿನ ಆಟ ಮುಂದುವರಿಸಿದ್ದ ಫಾಪ್ ಡುಪ್ಲೆಸಿಸ್ 72 ರನ್ (37 ಎಸೆತ, 1 ಬೌಂಡರಿ, 7 ಸಿಕ್ಸರ್) ವಿಕೆಟ್ ಕಳೆದುಕೊಂಡರು. ಧೋನಿ ಹಾಗೂ ರವೀಂದ್ರ ಜಡೇಜಾ ಔಟಾಗದೆ ಕ್ರಮವಾಗಿ 27 ರನ್ ಹಾಗೂ 1 ರನ್ ಬಾರಿಸಿದರು. ರಾಜಸ್ಥಾನದ ಪರ ರಾಹುಲ್ ತೇವಾಟಿಯಾ ಮೂರು ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಸಂಜು ಸಾಮ್ಸನ್ 74 ರನ್ (32 ಎಸೆತ, 1 ಬೌಂಡರಿ, 9 ಸಿಕ್ಸರ್) ನಾಯಕ ಸ್ಟೀವ್ ಸ್ಮಿತ್ 69 ರನ್ (47 ಎಸೆತ, 4 ಬೌಂಡರಿ, 4 ಸಿಕ್ಸರ್) ಹಾಗೂ ಜೋಫ್ರಾ ಆರ್ಚರ್ 27 ರನ್ (8 ಎಸೆತ, 4 ಸಿಕ್ಸರ್) ಸಹಾಯದಿಂದ 7 ವಿಕೆಟ್ ನಷ್ಟಕ್ಕೆ 216 ರನ್ ಪೇರಿಸಿತ್ತು.
PublicNext
22/09/2020 11:37 pm