ಶಾರ್ಜಾ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿ ಸಿಕ್ಸರ್ ಸುರಿಮಳೆ ಸುರಿಸಿದ ಹಿಂದಿನ ಸೀಕ್ರೆಟ್ ಅನ್ನು ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಸಂಜು ಸ್ಯಾಮ್ಸನ್ ರಿವೀಲ್ ಮಾಡಿದ್ದಾರೆ.
ಪಂಜಾಬ್ ವಿರುದ್ಧ ಪಂದ್ಯದ ಬಳಿಕ ಮಾತನಾಡಿದ ಸ್ಯಾಮ್ಸನ್, ಕಳೆದ ಒಂದು ವರ್ಷದಿಂದ ಸ್ಥಿರ ಪ್ರದರ್ಶನ ನೀಡುತ್ತಿದ್ದೇನೆ. ನನ್ನ ಆಟದಲ್ಲಿ ಸ್ಪಷ್ಟ ಬದಲಾವಣೆಗಳನ್ನು ಕಂಡುಕೊಂಡಿದ್ದೇನೆ. ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಇದರೊಂದಿಗೆ ಜೀವನದಲ್ಲಿ ಏನು ಸಾಧನೆ ಮಾಡಬೇಕು? ನನ್ನ ವೃತ್ತಿ ಜೀವನ ಅಂತ್ಯವಾಗುವ ವೇಳೆಗೆ ಎಲ್ಲಿ ಇರಬೇಕು ಎಂದು ಪ್ರಶ್ನೆ ಮಾಡಿಕೊಂಡಿದ್ದೆ. ಆ ಬಳಿಕ ಮುಂದಿನ 10 ವರ್ಷಗಳ ಕಾಲ ಕ್ರಿಕೆಟ್ ಆಡಬೇಕು ಎಂದು ನಿರ್ಧರಿಸಿ ನನ್ನ ಪೂರ್ತಿ ಸಮಯವನ್ನು ಇದಕ್ಕೆ ನೀಡಿದ್ದೆ. ನನ್ನ ಕುಟುಂಬ ಸದಸ್ಯರು, ಸ್ನೇಹಿತರು ನನಗೆ ಬೆಂಬಲವಾಗಿ ನಿಂತಿದ್ದರು. ನನ್ನ ಪೂರ್ತಿ ಸಾಮರ್ಥ್ಯವನ್ನು ಆಟದ ಕಡೆ ಗಮನಹರಿಸಿ ಆಡುತ್ತಿದ್ದು, ಫಲಿತಾಂಶ ಅದೇ ಬರುತ್ತದೆ ಎಂದು ವಿವರಿಸಿದ್ದಾರೆ.
ನನ್ನ ಸ್ಫೋಟಕ ಪವರ್ ಫುಲ್ ಸಿಕ್ಸರ್ ಗಳಿಗೆ ನನ್ನ ಜಿನ್ಸ್ ಕಾರಣ. ಏಕೆಂದರೆ ನಮ್ಮ ತಂದೆ ತುಂಬ ಪವರ್ ಫುಲ್ ವ್ಯಕ್ತಿ. ಉತ್ತಮ ಪ್ರದರ್ಶನ ನೀಡಲು ಫಿಟ್ ಆಗಿರುವುದು ಮುಖ್ಯವಾಗುತ್ತದೆ. ಆದ್ದರಿಂದಲೇ ಹೆಚ್ಚು ಫಿಟ್ನೆಸ್ ಕಡೆ ಗಮನಹರಿಸಿದ್ದೇನೆ ಎಂದು ಹೇಳಿದರು.
2020ರ ಐಪಿಎಲ್ ಆವೃತ್ತಿಯಲ್ಲಿ ಆಡಿರುವ 2 ಪಂದ್ಯಗಳಲ್ಲಿಯೂ ಅರ್ಧ ಶತಕ ಸಿಡಿಸಿ ಮಿಂಚಿರುವ ಸಂಜು ಸ್ಯಾಮ್ಸನ್ ಎಲ್ಲರ ಗಮನ ಸೆಳೆದಿದ್ದಾರೆ. ಚೆನ್ನೈ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 32 ಎಸೆಗಳಲ್ಲಿ 9 ಸಿಕ್ಸರ್, ಬೌಂಡರಿ ನೆರವಿನಿಂದ ತಂಡ 216 ರನ್‍ಗಳ ಟಾರ್ಗೆಟ್ ಬೆನ್ನಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2ನೇ ಪಂದ್ಯದಲ್ಲಿ 4 ಬೌಂಡರಿ, 7 ಸಿಕ್ಸರ್ ಗಳ ನೆರವಿನಿಂದ 42 ಎಸೆತಗಳಲ್ಲಿ 85 ರನ್ ಗಳಿಸಿ ಸತತ ಎರಡು ಪಂದ್ಯಗಳಲ್ಲಿ ಭಾರೀ ಸ್ಕೋರ್ ಗಳಿಸಿ ತಂಡ ಗೆಲುವಿಗೆ ತಮ್ಮ ಕಾಣಿಕೆ ನೀಡಿದ್ದರು. ಅಲ್ಲದೇ ಎರಡು ಬಾರಿಯೂ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದಾರೆ.
PublicNext
28/09/2020 02:40 pm