ಶಾರ್ಜಾ: ಕನ್ನಡಿಗರಾದ ಕೆ.ಎಲ್.ರಾಹುಲ್ ಭರ್ಜರಿ ಬ್ಯಾಟಿಂಗ್ ಹಾಗೂ ಮಯಾಂಕ್ ಅಗರ್ವಾಲ್ ಶತಕ ಸಹಾಯದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ರಾಜಸ್ಥಾನ್ ರಾಯಲ್ಸ್‌ಗೆ 224 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ಶಾರ್ಜಾ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ನ 9ನೇ ಪಂದ್ಯದಲ್ಲಿ ಪಂಜಾಬ್ ತಂಡವು ಮಯಾಂಕ್ ಅಗರ್ವಾಲ್ 106 ರನ್ (50 ಎಸೆತ, 10 ಬೌಂಡರಿ, 7 ಸಿಕ್ಸರ್) ಹಾಗೂ ನಾಯಕ ಕೆ.ಎಲ್.ರಾಹುಲ್ 69 ರನ್ ( 54 ಎಸೆತ, 7 ಬೌಂಡರಿ, 1 ಸಿಕ್ಸ್) ಸಹಾಯದಿಂದ 2 ವಿಕೆಟ್ ನಷ್ಟಕ್ಕೆ 223ರನ್ ಪೇರಿಸಿತು.
2ನೇ ಓವರ್ನಿಂದಲೇ ಬಿರುಸಿನ ಆಟಕ್ಕೆ ಮುಂದಾದ ರಾಹುಲ್ ಹಾಗೂ ಮಯಾಂಕ್ ಜೋಡಿ 4 ಓವರ್ಗಳಾಗುವಷ್ಟರಲ್ಲಿ ತಂಡದ ಮೊತ್ತವನ್ನು 40ಕ್ಕೆ ತಂದು ನಿಲ್ಲಿಸಿದ್ದರು. ಹಾಗೆಯೇ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಜೊತೆಯಾಟವಾಡಿದರು. ಅಲ್ಲದೆ ಪವರ್ ಪ್ಲೇನಲ್ಲಿ 60 ರನ್ಗಳನ್ನು ಕಲೆಹಾಕಿದರು. ಈ ವೇಳೆ ರಾಹುಲ್ ಬ್ಯಾಟ್ನಿಂದ ಸಿಡಿದದ್ದು 4 ಬೌಂಡರಿಗಳಾದರೆ, ಮಯಾಂಕ್ 2 ಭರ್ಜರಿ ಸಿಕ್ಸರ್ ಜೊತೆ 3 ಫೋರ್ ಬಾರಿಸಿದ್ದರು.
ಪವರ್ಪ್ಲೇ ಬಳಿಕ ಕೂಡ ಆರ್ಭಟ ಮುಂದುವರಿಸಿದ ಮಯಾಂಕ್ 26 ಎಸೆತಗಳಲ್ಲಿ 54 ರನ್ ಬಾರಿಸಿದರು. ಅಷ್ಟೇ ಅಲ್ಲದೆ ತಮ್ಮ ಸ್ಪೋಟಕ ಆಟದೊಂದಿಗೆ ಕಿಂಗ್ಸ್ ಇಲೆವೆನ್ ಮೊತ್ತವನ್ನು ಕೇವಲ 52 ಎಸೆತಗಳಲ್ಲಿ 100ರ ಗಡಿದಾಟಿಸಿದರು. ಹಾಗೆಯೇ ಮೊದಲ 10 ಓವರ್ಗಳಲ್ಲಿ ಪಂಜಾಬ್ ಆರಂಭಿಕರು ತಂಡದ ಮೊತ್ತವನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ 110ಕ್ಕೆ ತಂದು ನಿಲ್ಲಿಸಿದರು.
10 ಓವರ್ ಬಳಿಕ ರಾಹುಲ್ ಕೂಡ ಬಿರುಸಿನ ಆಟಕ್ಕೆ ಒತ್ತು ನೀಡಿದರು. ಪರಿಣಾಮ 34 ಎಸೆತಗಳಲ್ಲಿ ಐಪಿಎಲ್ನಲ್ಲಿ ತಮ್ಮ 17ನೇ ಅರ್ಧಶತಕ ಪೂರೈಸಿದರು. ಅಲ್ಲದೆ ಈ ಸ್ಫೋಟಕ ಜೊತೆಯಾಟದ ನೆರವಿನಿಂದ ಕಿಂಗ್ಸ್ ಇಲೆವೆನ್ 80 ಎಸೆತಗಳಲ್ಲಿ 150 ರನ್ ಗಳಿಸಿತು. ಇದರ ಬೆನ್ನಲ್ಲೇ 45 ಎಸೆತಗಳಲ್ಲಿ ಮಯಾಂಕ್ ಅಗರ್ವಾಲ್ ಐಪಿಎಲ್ನ ಮೊದಲ ಶತಕ ಸಿಡಿಸಿದರು. ಈ ಭರ್ಜರಿ ಸೆಂಚುರಿಯಲ್ಲಿ ಕನ್ನಡಿಗನ ಬ್ಯಾಟ್ನಿಂದ ಸಿಡಿದದ್ದು 7 ಭರ್ಜರಿ ಸಿಕ್ಸರ್ ಹಾಗೂ 9 ಬೌಂಡರಿಗಳು.
183 ರನ್ ಪೂರೈಸಿದ್ದಾಗ ಪಂಜಾಬ್ ತಂಡ ಮೊದಲ ವಿಕೆಟ್ ಕಳೆದುಕೊಂಡಿತು. ಶತಕದ ಬಳಿಕ ಭರ್ಜರಿ ಬ್ಯಾಟಿಂಗ್ ಆರಂಭಿಸಿದ್ದ ಮಯಾಂಕ್ (106 ರನ್) ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ನಾಯಕ ಕೆ.ಎಲ್. ರಾಹುಲ್ (69 ರನ್) ವಿಕೆಟ್ ಕಳೆದುಕೊಂಡು ಪೆವಿಲಿಯನ್‌ಗೆ ಮರಳಿದರು. ಕೊನೆಯಲ್ಲಿ ಮ್ಯಾಕ್ಸ್‌ವೆಲ್ (13 ರನ್) ಹಾಗೂ ನಿಕೋಲಸ್ ಪೂರನ್ (25 ರನ್) ಭರ್ಜರಿ ಬ್ಯಾಟಿಂಗ್ ಮಾಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
PublicNext
27/09/2020 09:13 pm