ಮೆಲ್ಬೋರ್ನ್: ವಿಶ್ವದ ನಂ.1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರನ್ನು ಆಸ್ಟ್ರೇಲಿಯಾದಲ್ಲಿ ಶನಿವಾರ ಮತ್ತೆ ಬಂಧಿಸಲಾಗಿದೆ.
ಕೋವಿಡ್-19 ಸೋಂಕಿಗೆ ಲಸಿಕೆ ಪಡೆಯದ ನೊವಾಕ್ ಜೊಕೊವಿಕ್ ಅವರು ಸಾರ್ವಜನಿಕರಿಗೆ ಅಪಾಯಕಾರಿ ಎಂದು ಘೋಷಿಸಲಾಗಿದೆ. ಅಷ್ಟೇ ಅಲ್ಲದೆ ಅವರ ವೀಸಾವನ್ನು ಎರಡನೇ ಬಾರಿ ಅಧಿಕಾರಿಗಳು ರದ್ದುಪಡಿಸಿದ್ದಾರೆ.
ನ್ಯಾಯಾಲಯದಲ್ಲಿ ಪ್ರತ್ಯೇಕ ಹೇಳಿಕೆ ಸಲ್ಲಿಸಿರುವ ಆಸ್ಟ್ರೇಲಿಯಾ ಅಧಿಕಾರಿಗಳು, "ಜೊಕೊವಿಕ್ ಅವರು ದೇಶದಲ್ಲಿ ಇದ್ದರೆ ಇದು ಲಸಿಕೆ ವಿರೋಧಿ ಮನೋಭಾವವನ್ನು ಪ್ರಚೋದಿಸಿದಂತಾಗುತ್ತದೆ. ತಕ್ಷಣ ಅವರನ್ನು ಗಡೀಪಾರು ಮಾಡಲು ಅನುಮತಿ ನೀಡಬೇಕು" ಎಂದು ಕೋರಿದ್ದಾರೆ.
ಪ್ರಸಕ್ತ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ನೊವಾಕ್ ಪಾಲ್ಗೊಳ್ಳುವುದು ಬಹುತೇಕ ಅನುಮಾನ ಎಂಬಂತ್ತಾಗಿದೆ. ತಮ್ಮ ವೃತ್ತಿಬದುಕಿನ 10ನೇ ಆಸ್ಟ್ರೇಲಿಯನ್ ಓಪನ್ ಮತ್ತು 21ನೇ ಗ್ರ್ಯಾಂಡ್ ಸ್ಲ್ಯಾಮ್ ಗೆಲುವನ್ನು ಅವರು ಎದುರು ನೋಡುತ್ತಿದ್ದರು. ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ನೊವಾಕ್ ಇತ್ತೀಚೆಗೆ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಕೆಲ ಗಂಟೆಗಳ ಕಾಲ ಅಭ್ಯಾಸವನ್ನೂ ನಡೆಸಿದ್ದಾರೆ. ಆದರೆ ವೀಸಾ ತಿರಸ್ಕೃತವಾಗಿರುವುದು ಬರ ಸಿಡಿಲಿನಂತೆ ಬಂದು ಅಪ್ಪಳಿಸಿದ್ದು, ಈ ಸಲುವಾಗಿ ಕಾನೂನು ಹೋರಾಟ ಒಂದೇ ಅವರೆದುರು ಇರುವ ಅಂತಿಮ ಮಾರ್ಗವಾಗಿದೆ.
PublicNext
15/01/2022 04:38 pm