ದುಬೈ: ನಾಯಕ ಕೆ.ಎಲ್.ರಾಹುಲ್ ಅರ್ಧಶತಕ, ನಿಕೋಲಸ್ ಪೂರನ್ ಭರ್ಜರಿ ಬ್ಯಾಟಿಂಗ್ ಸಹಾಯದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಗೆ 179 ರನ್‌ಗಳ ಗುರಿ ನೀಡಿದೆ.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡದ ಪರ ಕೆ.ಎಲ್.ರಾಹುಲ್ 63 ರನ್ (52 ಎಸೆತ, 7 ಬೌಂಡರಿ, 1 ಸಿಕ್ಸ್), ನಿಕೋಲಸ್ ಪೂರನ್ 33 ರನ್ (17 ಎಸೆತ, 1 ಬೌಂಡರಿ, 3 ಸಿಕ್ಸರ್) ಸಹಾಯದಿಂದ 4 ವಿಕೆಟ್ ನಷ್ಟಕ್ಕೆ 178 ರನ್ ಪೇರಿಸಿತು.
ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಹಾಗೂ ರಾಹುಲ್ ಉತ್ತಮ ಆರಂಭ ಒದಗಿಸಿದರು. ಪವರ್ ಪ್ಲೇ ಮುಕ್ತಾಯದ ವೇಳೆ ತಂಡದ ಮೊತ್ತವನ್ನು 46ಕ್ಕೆ ತಂದು ನಿಲ್ಲಿಸಿದರು. ಬಳಿಕ ವೇಗದ ಆಟಕ್ಕೆ ಒತ್ತು ನೀಡಿದ ಮಯಾಂಕ್ ಅಗರ್ವಾಲ್ (26 ರನ್) ವಿಕೆಟ್ ಕಳೆದುಕೊಂಡರು.
ಮಂದೀಪ್ ಸಿಂಗ್ ಆರಂಭದಲ್ಲೇ ಭರ್ಜರಿ ಬ್ಯಾಟಿಂಗ್ ನಡೆಸಿದ್ದರು. ಆದರೆ 12ನೇ ಓವರಿನಲ್ಲಿ ರಾಯುಡುಗೆ ಸುಲಭ ಕ್ಯಾಚ್ ನೀಡಿದರು. ಅವರು 16 ಎಸೆತಗಳಲ್ಲಿ 27 ರನ್ ಬಾರಿಸಿದರು. ಇತ್ತ ಕೆಎಲ್ ರಾಹುಲ್ 45 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 3 ಭರ್ಜರಿ ಸಿಕ್ಸರ್ ಹಾಗೂ 1 ಬೌಂಡರಿಯೊಂದಿಗೆ 17 ಎಸೆತಗಳಲ್ಲಿ 33 ರನ್ ಬಾರಿಸಿದ್ದ ಪೂರನ್ ಬಿಗ್ ಹಿಟ್ಗೆ ಮುಂದಾಗಿ ಬೌಂಡರಿ ಲೈನ್ನಲ್ಲಿ ಜಡೇಜಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಧೋನಿಗೆ ಕ್ಯಾಚ್ ನೀಡಿ ಕೆಎಲ್ ರಾಹುಲ್ (63 ರನ್) ಕೂಡ ಪೆವಿಲಿಯನ್ ಕಡೆ ಮುಖ ಮಾಡಿದರು.ಕೊನೆಯಲ್ಲಿ ಬ್ಯಾಟಿಂಗ್ ಮಾಡಿದ ಮ್ಯಾಕ್ಸ್‌ವೆಲ್ ಔಟಾಗದೆ 11 ರನ್ ಹಾಗೂ ಸರ್ಫರಾಜ್ ಖಾನ್ ಅಜೇಯ 14 ರನ್ ಗಳಿಸಿದರು.
PublicNext
04/10/2020 09:27 pm