ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಯಶಸ್ವಿ' ಪಾನಿಪುರಿಯ ಕಥೆ- 'ತುತ್ತು ಅನ್ನಕ್ಕೆ ಹೋರಾಡಿದ್ದ ಆ ರಾಯಲ್ ಬ್ಯಾಟ್ಸ್‌ಮನ್'

ವಿಜಯಕುಮಾರ ಗಾಣಿಗೇರ

ಯಶಸ್ಸು ಅನ್ನೋದು ಸುಮ್ಮನೆ ಸಿಕ್ಕುಬಿಡುವ ವಸ್ತು, ಅನುಭವ, ಸ್ಥಾನವಲ್ಲ. ಪರಿಶ್ರಮ, ಶ್ರದ್ಧೆ, ಗುರಿ ತಲುಪುವ ಹಂಬಲ ಇದ್ದರೆ ಮಾತ್ರ ಯಶಸ್ಸಿನ ಖಾತೆ ಓಪನ್ ಆಗುತ್ತೆ. ಹೀಗೆ ಗುರಿ, ಶ್ರದ್ಧೆ ಹೊತ್ತು ಉತ್ತರ ಪ್ರದೇಶದಿಂದ ಮುಂಬೈ ನಗರಿಗೆ ಬಂದು ಕಷ್ಟಗಳ ವಿರುದ್ಧ ಹೋರಾಡಿ ಗೆದ್ದವನು ರಾಯಲ್ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್.

ಜೈಸ್ವಾಲ್ ಉತ್ತರ ಪ್ರದೇಶದ ಭದೋಹಿಯವನು. ಅಪ್ಪ ಪಾನಿಪುರಿ ವ್ಯಾಪಾರಿ. ಮಗನಿಗೆ ಟೀಂ ಇಂಡಿಯಾಗೆ ಆಡಬೇಕು ಎನ್ನುವ ಆಸೆ. ಕ್ರಿಕೆಟ್‌ ತರಬೇತಿಗೆ ಮುಂಬೈ ಸೂಕ್ತ ಸ್ಥಳ ಅಂತ ಪರಿಚಯಸ್ಥರು ಹೇಳುತ್ತಾರೆ. ಈ ದುಬಾರಿ ನಗರದಲ್ಲಿ ಹಣ ಪಾವತಿಸದೇ ವಸತಿ ಸಿಗುವುದು ಕಷ್ಟ. ಹೀಗಾಗಿ ಯಾವುದೋ ಪರಿಚಯದ ಮೇಲೆ ಕೇವಲ ಮಲಗಲಿಕ್ಕೆ ಮಾತ್ರ ಮುಂಬೈನ ಕಲಬಾದೇವಿ ಪ್ರದೇಶದ ಹಾಲಿನ ಬೂತಿನ ಮಾಲೀಕನನ್ನು ಒಪ್ಪಿಸಿರುತ್ತಾರೆ. ಆದರೆ ಸ್ವಲ್ಪ ದಿನದ ಬಳಿಕ ಏನೂ ಕೆಲಸ ಮಾಡಲ್ಲ ಎಂಬಷ್ಟೇ ಕಾರಣಕ್ಕೆ 11ವರ್ಷದ ಪುಟ್ಟ ಜೈಸ್ವಾಲ್ ನನ್ನು ಆ ಮಾಲೀಕ ಬೀದಿಗೆ ತಳ್ಳಿಬಿಡುತ್ತಾನೆ.

ಇದನ್ನೆಲ್ಲ ತಂದೆ ತಿಳಿಸಿದರೆ ವಾಪಸ್ ಕರೆಸಿಕೊಳ್ಳುತ್ತಾರೆ. ಟೀಂ ಇಂಡಿಯಾ ಪರ ಆಡುವ ಕನಸು ಕನಸಾಗಿಯೇ ಉಳಿಯುತ್ತೆ ಎಂದುಕೊಂಡ ಜೈಸ್ವಾಲ್ ಮುಂಬೈನಲ್ಲಿದ್ದ ತಂದೆಯ ಗೆಳೆಯರೊಬ್ಬರ ಬಳಿ ತನ್ನ ಕಷ್ಟಗಳನ್ನ ತೋಡಿಕೊಳ್ಳುತ್ತಾನೆ. ಬಳಿಕ ಇಬ್ಬರು ಮುಸ್ಲಿಂ ಕಬ್ ಮಾಲೀಕರೊಬ್ಬರನ್ನ ಕಾಡಿ ಬೇಡಿ ಟೆಂಟ್ ನಲ್ಲಿ ಉಳಿದುಕೊಳ್ಳು ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ.

ತಾನು ಪಟ್ಟ ಕಷ್ಟದ ಒಂದೇ ಒಂದು ಅಕ್ಷರವೂ, ಅಪ್ಪ ಅಮ್ಮನಿಗೆ ಗೊತ್ತಾಗದಂತೆ ನೋಡಿಕೊಂಡಿರುತ್ತಾನೆ. ಅಪ್ಪ ಕಳಿಸುತ್ತಿದ್ದ ಹಣ ಯಾವುದಕ್ಕೂ ಸಾಲುತ್ತಿರಲಿಲ್ಲ. ಹೀಗಾಗಿ ಎಷ್ಟೋ ದಿನ ಹಸಿದು ಬಂದು ಟೆಂಟ್ ನಲ್ಲಿ ಏನೂ ಇಲ್ಲದೆ ಜೈಸ್ವ್ ಮಲಗಿದ್ದ.

ಜೈಸ್ವಾಲ್ ತನಗಿಂತ ದೊಡ್ಡವರ ಜೊತೆಗೆ ಕ್ರಿಕೆಟ್ ಆಡುತ್ತಿದ್ದ. ಆಗ ಅವ್ರು ಒಂದು ಸೆಂಚುರಿ ಹೊಡಿ, 200 ರೂಪಾಯಿ ಕೊಡ್ತೀನಿ ಅಂತಿದ್ರು. ಸೀದ ಹೋದವನೇ ಸೆಂಚುರಿ ಚಚ್ಚಿ 200 ರೂಪಾಯಿ ಜೇಬಿಗಿಳಿಸುತ್ತಿದ್ದ. ಅಷ್ಟೂ ಹಣಕ್ಕೂ ಹೊಟ್ಟೆ ತುಂಬ ಊಟ ಮಾಡಿಬಿಡುತ್ತಿದ್ದ.

ಮುಂಬೈನ ಅಝಾದ್ ಮೈದಾನದಲ್ಲಿ ರಾಮ್ ಲೀಲಾ ಶುರುವಾದರೆ ಯಶಸ್ವಿ ಜೈಸ್ವಾಲ್ ಪಾನಿಪುರಿ ಮಾರುತ್ತಿದ್ದ. ಒಮ್ಮೊಮ್ಮೆ ಇವನ ತಂಡದ ಸಹ ಆಟಗಾರರು ಇವನ ಹತ್ತಿರವೇ ಪಾನಿಪುರಿಗೆ ಬಂದುಬಿಡುತ್ತಿದ್ದರು. ಸಂಕೋಚದಿಂದಲೇ ಪಾನಿಪುರಿ ಕೊಡುತ್ತಿದ್ದ. ಹೀಗೇ ಪಾನಿಪುರಿ ಮಾರಿಕೊಂಡು ಆಡುತ್ತಿದ್ದ ಜೈಸ್ವಾಲ್, ಲೋಕಲ್‌ ಕೋಚ್ ಜ್ವಾಲಾ‌ ಸಿಂಗ್ ಕಣ್ಣಿಗೆ ಬಿದ್ದ. ಅವನ ಬ್ಯಾಟಿಂಗ್ ಅಬ್ಬರ ಕಂಡ ಜ್ವಾಲಾ ಸಿಂಗ್ ಸಹಾಯಕ್ಕೆ ನಿಂತರು.

ಬಳಿಕ ಜೈಸ್ವಾಲ್ ಮುಂಬೈ ಅಂಡರ್ 19 ಕೋಚ್ ಸಂತೋಷ್ ಸಾಮಂತ್ ಕಣ್ಣಿಗೆ ಬಿದ್ದ. ಅಲ್ಲಿಂದ ಜೈಲ್ವಾಲ್ ಯಶಸ್ವಿ ಇನ್ನಿಂಗ್ಸ್ ಆರಂಭಿಸಿದ.

ಕೇವಲ 17ನೇ ವಯಸ್ಸಿನಲ್ಲಿ ದೇಶಿ ಕ್ರಿಕೆಟ್ ಪಂದ್ಯವೊಂದರಲ್ಲಿ ವೇಗದ ದ್ವಿಶತಕ ಭಾರಿಸಿದ ಸಾಧನೆ ಜೈಸ್ವಾಲ್ ಹೆಸರಿನಲ್ಲಿದೆ. ವಿಜಯ ಹಜಾರೆ ಟ್ರೋಫಿಯಲ್ಲಿ ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ154 ಎಸೆತಗಳಲ್ಲಿ 203 ರನ್ ಭಾರಿಸಿ ಧೂಳೆಬ್ಬಿಸಿದ ಜೈಸ್ವಾಲ್ ಹೆಸರು ಜನಪ್ರಿಯವಾಗಿತ್ತು. ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನಕ್ಕೆ ಹಿರಿಯ ಆಟಗಾರರಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು.

2020ರ ಅಂಡರ್ -19 ವಿಶ್ವಕಪ್‌ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಯಶಸ್ವಿ ಜೈಸ್ವಾಲ್ 400 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಸಣ್ಣ ವಯಸ್ಸಿನಲ್ಲಿಯೇ ಅದ್ಭುತ ಆಟದ ಮೂಲಕ ಗಮನ ಸೆಳೆದಿದ್ದ ಜೈಸ್ವಾಲ್ ಗೆ ಐಪಿಎಲ್ ಟೂರ್ನಿಯಿಂದ ಅದೃಷ್ಟ ಖುಲಾಯಿಸಿತ್ತು. 2020ರ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಜೈಸ್ವಾಲ್ ಅವರನ್ನು 2.4 ಕೋಟಿ ರೂ. ದೊಡ್ಡ ಮೊತ್ತಕ್ಕೆ ಖರೀದಿಸಿತು.

Edited By : Manjunath H D
PublicNext

PublicNext

30/09/2021 07:47 pm

Cinque Terre

200.57 K

Cinque Terre

2