ದುಬೈ: ಕೊನೆಯಲ್ಲಿ ಭಾರೀ ರೋಚಕೆ ಮೂಡಿಸಿದ್ದ ಹೈದರಾಬಾದ್ ತಂಡದ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಗೆಲುವು ದಾಖಲಿಸಿದೆ.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡವು ಹೈದರಾಬಾದ್ ತಂಡದ ವಿರುದ್ಧ 10 ರನ್‌ಗಳಿಂದ ಗೆದ್ದುಬೀಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ 164 ರನ್‌ಗಳ ಗುರಿ ನೀಡಿತ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಹೈದರಾಬಾದ್ ತಂಡ ಆರಂಭದಲ್ಲೇ ಆಘಾತ ಎದುಸಿತು. ನಾಯಕ ದೇವಿಡ್ ವಾರ್ನರ್ 6 ರನ್ ಗಳಿಸಿ ಬಹುಬೇಗ ಪೆವಿಲಿಯನ್‌ಗೆ ಮರಳಿದರು. ಈ ವೇಳೆ ಜಾನಿ ಬೈರ್ಸ್ಟೋ ಹಾಗೂ ಮನೀಶ್ ಪಾಂಡೆ ಉತ್ತಮ ಜೊತೆಯಾಟ ತೋರಿದರು. ಈ ಜೋಡಿ ಎರಡನೇ ವಿಕೆಟ್ ನಷ್ಟಕ್ಕೆ 89 ರನ್ ಕಲೆಹಾಕಿತು. ಮನೀಶ್ ಪಾಂಡೆ 34 ರನ್ (33 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಜಾನಿ ಬೈರ್ಸ್ಟೋ 61ರನ್ (43 ಎಸೆತ, 6 ಬೌಂಡರಿ, 2 ಸಿಕ್ಸ್) ಗಳಿಸಿ ಯಜುವೇಂದ್ರ ಚಹಲ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ವಿಜಯ್ ಶಂಕರ್ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡರು.
ಚಹಲ್ ಹಾಗೂ ನವದೀಪ್ ಸೈನಿ ಬೌಲಿಂಗ್ ದಾಳಿಗೆ ತತ್ತರಿಸಿದ ಹೈದರಾಬಾದ್ ತಂಡವು ಸೋಲಿಗೆ ಶರಣಾಯಿತು. ಯಜುವೇಂದ್ರ ಚಹಲ್ ಮೂರು ವಿಕೆಟ್ ಪಡೆದರೆ, ಶಿವಂ ದುಬೈ ಹಾಗೂ ನವದೀಪ್ ಸೈನಿ ತಲಾ ಎರಡು ವಿಕೆಟ್ ಪಡೆದು ತಂಡದ ಗೆಲುವಿಗೆ ಕೊಡುಗೆ ನೀಡಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ದೇವದತ್ ಪಡಿಕ್ಕಲ್ 56 ರನ್ (42 ಎಸೆತ, 8 ಬೌಂಡರಿ) ಆ್ಯರೋನ್ ಫಿಂಚ್ 29 ರನ್ (27 ಎಸೆತ, 1 ಬೌಂಡರಿ, 2 ಸಿಕ್ಸ್), ವಿರಾಟ್ ಕೊಹ್ಲಿ 14 ರನ್ (13 ಎಸೆತ), ಎಬಿ ಡಿವಿಲಿಯರ್ಸ್ 51 ರನ್ (30 ಎಸೆತ, 4 ಬೌಂಡರಿ, 2 ಸಿಕ್ಸ್) ಸಹಾಯದಿಂದ 5 ವಿಕೆಟ್ ನಷ್ಟಕ್ಕೆ 163 ರನ್ ದಾಖಲಿಸಿತ್ತು.
PublicNext
21/09/2020 11:37 pm