ದುಬೈ: ಬ್ಯಾಟಿಂಗ್ ವೈಫಲ್ಯದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ದೆಹಲಿ ಕ್ಯಾಪಿಟಲ್ಸ್ ವಿರುದ್ಧ 44 ರನ್‌ಗಳ ಅಂತರದಿಂದ ಹೀನಾಯ ಸೋಲು ಕಂಡಿದೆ. ಇತ್ತ ನಾಯಕ ಎಂ.ಎಸ್.ಧೋನಿಯ ಪ್ಲ್ಯಾನ್ ಸತತ ಎರಡನೇ ಬಾರಿಗೆ ತೆಲೆ ಕೆಳಗಾಗಿದೆ.
ದುಬೈನಲ್ಲಿ ಇಂದು ನಡೆದ ಐಪಿಎಲ್-13ನೇ ಆವೃತ್ತಿಯ 7ನೇ ಪಂದ್ಯದಲ್ಲಿ ದೆಹಲಿ ನೀಡಿದ್ದ 176 ರನ್‌ಗಳ ಗುರಿ ಬೆನ್ನಟ್ಟುವಲ್ಲಿ ವಿಫಲವಾದ ಧೋನಿ ಪಡೆ ನಿಗದಿತ 20 ಓವರ್‌ಗಳಲ್ಲಿ7 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲು ಮಾತ್ರ ಶಕ್ತವಾಯಿತು. ಚೆನ್ನೈ ಪರ ಫಾಫ್ ಡುಪ್ಲೆಸಿಸ್ 43 ರನ್ ಹಾಗೂ ಕೇದಾರ್ ಜಾಧವ್ 26 ರನ್ ಹೊರತು ಧೋನಿ ಸೇರಿದಂತೆ ಉಳಿದ ಎಲ್ಲಾ ಆಟಗಾರರು ಬ್ಯಾಟಿಂಗ್ ವೈಫಲ್ಯ ತೋರಿದರು.
ಆರಂಭಿಕರಾದ ಶೇನ್ ವಾಟ್ಸ್ನ್ ಹಾಗೂ ಮುರಳಿ ವಿಜಯ್ ರಕ್ಷಣಾತ್ಮಕ ಆಟದೊಂದಿಗೆ ಇನಿಂಗ್ಸ್ ಆರಂಭಿಸಿತು. ಪರಿಣಾಮ ಪವರ್ ಪ್ಲೇನ ಮೊದಲ ಮೂರು ಓವರ್ನಲ್ಲಿ ಮೂಡಿ ಬಂದಿದ್ದು ಕೇವಲ 10 ರನ್ ಮಾತ್ರ. ಇದೇ ವೇಳೆ 2 ರನ್ಗಳಿಸಿದ್ದ ವಾಟ್ಸ್ನ್ ನೀಡಿದ ಸುಲಭ ಕ್ಯಾಚ್ ಕೈಚೆಲ್ಲುವ ಮೂಲಕ ಪೃಥ್ವಿ ಶಾ ಜೀವದಾನ ನೀಡಿದರು. ಆದರೆ ಇದನ್ನು ಸದುಪಯೋಗಪಡಿಸುವಲ್ಲಿ ವಿಫಲರಾದ ಅನುಭವಿ ಆಟಗಾರ 16 ರನ್ ಬಾರಿಸಿ ಅಕ್ಷರ್ ಪಟೇಲ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಈ ವೇಳೆ ಜೊತೆಗೂಡಿದ ಫಾಫ್ ಡುಪ್ಲೆಸಿಸ್ ಹಾಗೂ ಯುವ ಬ್ಯಾಟ್ಸ್ಮನ್ ರುತುರಾಜ್ ರಕ್ಷಣಾತ್ಮಕ ಆಟಕ್ಕೆ ಮುಂದಾದರು. ಆದರೆ 10ನೇ ಓವರ್ನಲ್ಲಿ ಕೀಪರ್ ಪಂತ್ ಎಸೆದ ಉತ್ತಮ ಥ್ರೋಗೆ ರನೌಟ್ ಆಗುವ ಮೂಲಕ ರುತುರಾಜ್ (5) ಪೆವಿಲಿಯನ್ಗೆ ಮರಳಬೇಕಾಯಿತು. ವೈಯುಕ್ತಿಕವಾಗಿ 17 ರನ್ಗಳಿಸುವುದರೊಂದಿಗೆ ಫಾಪ್ ಡುಪ್ಲೆಸಿಸ್ ಐಪಿಎಲ್ನಲ್ಲಿ 2000 ರನ್ ಪೂರೈಸಿದರು. 4ನೇ ವಿಕೆಟ್ಗೆ 54 ರನ್‌ಗಳ ಜೊತೆಯಾಟವಾಡಿದ ಕೇದರ್ ಜಾಧವ್ (26) ನಾರ್ಟ್ಜೆ ಎಸೆತವನ್ನು ಗುರುತಿಸುವಲ್ಲಿ ಎಡವಿ ಎಲ್ಬಿ ಬಲೆಗೆ ಬಿದ್ದರು. ಈ ಬೆನ್ನಲ್ಲೆ ಡುಪ್ಲೆಸಿಸ್ ವಿಕೆಟ್ ಒಪ್ಪಿಸಿ ಹೊರ ನಡೆದರು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಧೋನಿ ಪಡೆ ದೆಹಲಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ವಿಫಲವಾಯಿತು. ಅಷ್ಟೇ ಅಲ್ಲದೆ ಧೋನಿ ಈ ಪಂದ್ಯದಲ್ಲೂ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದರು. ಇದು ಒಂದು ಕಡೆ ತಂಡದ ಸೋಲಿಗೆ ಕಾರಣವಾಯಿತು ಎನ್ನಲಾಗುತ್ತಿದೆ.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪೃಥ್ವಿ ಶಾ 65 ರನ್ (43 ಎಸೆತ, 9 ಬೌಂಡರಿ, 1 ಸಿಕ್ಸ್), ಶಿಖರ್ ಧವನ್ 35 ರನ್ (27 ಎಸೆತ, 3 ಬೌಂಡರಿ, 1 ಸಿಕ್ಸ್), ರಿಷಬ್ ಪಂತ್ ಔಟಾಗದೆ 37 ರನ್ (25 ಎಸೆತ, 5 ಬೌಂಡರಿ) ಹಾಗೂ ಶ್ರೇಯಸ್ ಅಯ್ಯರ್ 26 ರನ್ (22 ಎಸೆತ, 1 ಬೌಂಡರಿ) ಸಹಾಯದಿಂದ 3 ವಿಕೆಟ್ ನಷ್ಟಕ್ಕೆ 175 ರನ್ ದಾಖಲಿಸಿತ್ತು.
PublicNext
25/09/2020 11:14 pm