ಅಬುಧಾಬಿ: ನಾಯಕ ಶ್ರೇಯಸ್ ಅಯ್ಯರ್, ಪೃಥ್ವಿ ಶಾ, ಶಿಖರ್ ಧವನ್ ಸೇರಿದಂತೆ ಎಲ್ಲ ಆಟಗಾರರ ಬ್ಯಾಟಿಂಗ್ ವೈಫಲ್ಯದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 15 ರನ್‌ಗಳಿಂದ ಸೋಲು ಕಂಡಿದೆ.
ಅಬುಧಾಬಿಯ ಶೇಖ್ ಝಾಯದ್ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಹೈದರಾಬಾದ್ ನೀಡಿದ್ದ 163 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲು ಶಕ್ತವಾಯಿತು. ಡೆಲ್ಲಿ ಪರ ಶಿಖರ್ ಧವನ್ 34 ರನ್ (31 ಎಸೆತ, 4 ಬೌಂಡರಿ), ರಿಷಬ್ ಪಂತ್ 32 ರನ್ (27 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಶಿಮ್ರಾನ್ ಹೆಟ್ಮೇರ್ 21 ರನ್ (12 ಎಸೆತ, 2 ಸಿಕ್ಸರ್) ಗಳಿಸಿದರು.
163 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಹೈದರಾಬಾದ್ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಆಘಾತ ನೀಡಿದರು. 2 ರನ್ ಗಳಿಸಿ ಮೊದಲ ಓವರ್ನಲ್ಲಿ ಪೃಥ್ವಿ ಶಾ ವಿಕೆಟ್ ಕಳೆದುಕೊಂಡು ಪೆವಿಲಿಯನ್‌ಗೆ ಮರಳಿದರು. ಬಳಿಕ ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಆರಂಭಿಕ ಶಿಖರ್ ಧವನ್ ನಿಧಾನಗತಿಯಲ್ಲಿ 40 ರನ್ಗಳ ಜೊತೆಯಾಟವಾಡಿದರು. ಆದರೆ ಈ ವೇಳೆ ದಾಳಿಗಿಳಿದ ರಶೀದ್ ಖಾನ್ ಎಸೆತದಲ್ಲಿ ಅಯ್ಯರ್ (17) ಸಮದ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ರಿಷಬ್ ಪಂತ್ ಕೂಡ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಪರಿಣಾಮ 11 ಓವರ್ ಮುಕ್ತಾಯದ ವೇಳೆಗೆ ಡೆಲ್ಲಿ ಕ್ಯಾಪಿಟಲ್ಸ್ 60 ರನ್ ಮಾತ್ರ ಗಳಿಸಿತು. ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಶಿಖರ್ ಧವನ್ (34 ರನ್) ಗೂ ಪೆವಿಲಿಯನ್ ಹಾದಿ ತೋರಿಸುವಲ್ಲಿ ರಶೀದ್ ಖಾನ್ ಯಶಸ್ವಿಯಾದರು. 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಹೆಟ್ಮೆಯರ್ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಆದರೆ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಬಿಗ್ ಹಿಟ್ಗೆ ಕೈ ಹಾಕಿ ಕ್ಯಾಚ್ ನೀಡಿ ಹೊರ ನಡೆದರು. ಮುಂದಿನ 13 ರನ್ ಅಂತರದಲ್ಲೇ ರಿಷಬ್ ಪಂತ್ ಕೂಡ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ತಂಡ ಸೋಲಿಗೆ ಗುರಿಯಾಯಿತು.
PublicNext
29/09/2020 11:31 pm