ಅಬು ಧಾಬಿ (ಸೆ. 19): ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಿದ್ದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಅಂಬಟಿ ರಾಯುಡು ಅವರ ಮನಮೋಹಕ ಅರ್ಧಶತಕ ಹಾಗೂ ಫಾಫ್ ಡುಪ್ಲೆಸ್ ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಧೋನಿ ಪಡೆ 5 ವಿಕೆಟ್ಗಳ ಜಯ ಸಾಧಿಸಿ ಐಪಿಎಲ್ 2020ರಲ್ಲಿ ಶುಭಾರಂಭ ಮಾಡಿದೆ.
ಟಾಸ್ ಗೆದ್ದ ಚೆನ್ನೈ ನಾಯಕ ಧೋನಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆದುಕೊಂಡಿತು. ನಾಯಕ ರೋಹಿತ್ ಶರ್ಮಾ ಮೊದಲ ಓವರ್ನ ಮೊದಲ ಎಸೆತದಲ್ಲೇ ತಮ್ಮ ಶೈಲಿಯಲ್ಲಿ ಚೆಂಡನ್ನು ಬೌಂಡರಿಗೆ ಅಟ್ಟಿದರು. ಡಿಕಾಕ್ ಕೂಡ ಆಕ್ರಮಣ ಆಟ ಪ್ರದರ್ಶಿಸಿದರು. 4 ಓವರ್ನಲ್ಲೇ ತಂಡದ ಮೊತ್ತ 40ರ ಗಡಿ ದಾಟಿತು.
ಆದರೆ, ಈ ಸಂದರ್ಭ ಬೌಲಿಂಗ್ ಮಾಡಲು ಬಂದ ಪಿಯೂಷ್ ಚಾವ್ಲಾ ರೋಹಿತ್ ಶರ್ಮಾ(12) ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಇದರ ಮುಂದಿನ ಓವರ್ನಲ್ಲೇ 20 ಎಸೆತಗಳಲ್ಲಿ 33 ರನ್ ಬಾರಿಸಿದ್ದ ಡಿಕಾಕ್ ಕೂಡ ಔಟ್ ಆದರು.
ಬಳಿಕ ಸೂರ್ಯಕುಮಾರ್ ಯಾದವ್ ಹಾಗೂ ಸೌರಭ್ ತಿವಾರಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಈ ಜೋಡಿ 44 ರನ್ಗಳ ಜೊತೆಯಾಟ ಆಡಿತು. ಆದರೆ, ಸೂರ್ಯಕುಮಾರ್ ಯಾದವ್ 17 ರನ್ ಗಳಿಸಿ ಔಟ್ ಆದರು. ಇದರ ಬೆನ್ನಲ್ಲೆ ತಿವಾರಿ ಕೂಡ (31 ಎಸೆತ 42 ರನ್) ಕೂಡ ನಿರ್ಗಮಿಸಿದರು. ಹಾರ್ದಿಕ್ ಪಾಂಡ್ಯ ಬಂದ ಬೆನ್ನಲ್ಲೇ ಎರಡು ಸಿಕ್ಸರ್ ಸಿಡಿಸಿ ಔಟ್ ಆದರೆ. ಕೃನಾಲ್ ಪಾಂಡ್ಯ ಆಟ ಕೇವಲ 3 ರನ್ಗೆ ಅಂತ್ಯವಾಯಿತು.
ಪಂದ್ಯವನ್ನು ಫಿನಿಶ್ ಮಾಡುವ ಜವಾಬ್ದಾರಿ ಹೊತ್ತ ಕೀರೊನ್ ಪೊಲಾರ್ಡ್ ಕೂಡ 18 ರನ್ಗೆ ನಿರ್ಗಮಿಸಿ ಶಾಕ್ ನೀಡಿದರು. ಬಳಿಕ ಬಂದ ಬ್ಯಾಟ್ಸ್ಮನ್ಗಳು ಅಷ್ಟೊಂದು ಪರಾಕ್ರಮ ಮೆರೆಯಲಿಲ್ಲ. ಅಂತಿಮವಾಗಿ ಮುಂಬೈ ಇಂಡಿಯನ್ಸ್ 20 ಓವರ್ನಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು. ಚೆನ್ನೈ ಪರ ಲುಂಗಿ ಎನ್ಗಿಡಿ 3 ಹಾಗೂ ರವೀಂದ್ರ ಜಡೇಜಾ 2 ವಿಕೆಟ್ ಕಿತ್ತು ಮಿಂಚಿದರು.
PublicNext
19/09/2020 11:28 pm