ದುಬೈ: ಐಪಿಎಲ್-13ನೇ ಆವೃತ್ತಿಯ ಆರಂಭದಲ್ಲೇ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಆಘಾತಕ್ಕೆ ತುತ್ತಾಗಿವೆ.
ಹೈದರಾಬಾದ್ ತಂಡದಲ್ಲಿ ವೇಗದ ಬೌಲರ್ ಪಡೆಯನ್ನು ಮುನ್ನಡೆಸುತ್ತಿದ್ದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಹಾಗೂ ಡೆಲ್ಲಿ ತಂಡದ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಸೊಂಟದ ನೋವಿನಿಂದ ಬಳಲುತ್ತಿರುವ ಭುವನೇಶ್ವರ್ ಕುಮಾರ್ ಅವರು ಮುಂದಿನ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ ಎಂದು ಹೈದರಾಬಾದ್ ತಂಡದ ವಕ್ತಾರರು ಖಚಿತಪಡಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ 19ನೇ ಓವರ್ ಬೌಲಿಂಗ್ ನಡೆಸುತ್ತಿದ್ದ ವೇಳೆ ಭುವನೇಶ್ವರ್ ಕುಮಾರ್ ಸ್ನಾಯುಸೆಳೆತಕ್ಕೆ ಒಳಗಾಗಿ ಅರ್ಧಕ್ಕೆ ಬೌಲಿಂಗ್ ನಿಲ್ಲಿಸಿ ಪೆವಿಲಿಯನ್ ಕಡೆಗೆ ತೆರಳಿದ್ದರು. ಒಂದೆರಡು ಬಾರಿ ಬೌಲಿಂಗ್ ಮುಂದುವರಿಸುವ ಪ್ರಯತ್ನಿಸಿದರಾದರೂ ಬಳಿಕ ಸಾಧ್ಯವಾಗಿರಲಿಲ್ಲ. ಮುಂಬೈ ವಿರುದ್ಧದ ಪಂದ್ಯದಲ್ಲೂ ಆಡಲು ಸಾಧ್ಯವಾಗಿರಲಿಲ್ಲ.
ಇತ್ತ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ಚೆಂಡನ್ನು ತಡೆಯಲು ಯತ್ನಿಸಿದ ಮಿಶ್ರಾ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಬೌಲಿಂಗ್ ಮಾಡುವ ಬೆರಳಿಗೇ ತೀವ್ರ ಗಾಯ ಆಗಿರುವುದರಿಂದ ಮಿಶ್ರಾ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
PublicNext
05/10/2020 06:25 pm