ಢಾಕಾ: ಬಾಂಗ್ಲಾದೇಶದ ಜನಪ್ರಿಯ ಟಿ20 ಕ್ರಿಕೆಟ್ ಟೂರ್ನಿಯಾದ ಬಂಗಬಂಧು ಟಿ20 ಕಪ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಸಹ ಆಟಗಾರನ ಮೇಲೆ ಹಲ್ಲೆಗೆ ಮುಂದಾದ ವಿಚಾರವಾಗಿ ಅನುಭವಿ ವಿಕೆಟ್‌ಕೀಪರ್, ಬ್ಯಾಟ್ಸ್‌ಮನ್ ಮುಷ್ಫಿಕರ್ ರಹೀಮ್ ಕ್ಷಮೆ ಕೇಳಿದ್ದಾರೆ.
ಬಂಗಬಂಧು ಟಿ20 ಟೂರ್ನಿಯಲ್ಲಿ ಅಗ್ರ ನಾಲ್ಕು ತಂಡಗಳು ಪ್ಲೇ ಆಫ್‌ನಲ್ಲಿ ಸ್ಥಾನ ಪಡೆದಿವೆ. ಬೆಕ್ಸಿಮ್ಕೊ ಢಾಕಾ ಮತ್ತು ಫಾರ್ಚೂನ್ ಬಾರಿಶಾಲ್ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಸೋಮವಾರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮುಷ್ಫಿಕರ್ ರಹೀಮ್ ನೇತೃತ್ವದ ಢಾಕಾ ತಂಡವು ಒಂಬತ್ತು ರನ್ಗಳಿಂದ ಜಯಸಾಧಿಸಿದೆ. ಆದರೆ ಮುಷ್ಫಿಕರ್ ರಹೀಮ್ ಸಹ ಆಟಗಾರ ನಸುಮ್ ಅಹ್ಮದ್ ಅವರ ಮೇಲೆ ಕೈ ಎತ್ತಿದ ಘಟನೆ ನಡೆದಿದ್ದು ಭಾರೀ ಟೀಕೆಗೆ ಕಾರಣವಾಗಿದೆ.
ಫಾರ್ಚೂನ್ ಬಾರಿಶಾಲ್ ಇನ್ನಿಂಗ್ಸ್‌ನ 17ನೇ ಓವರ್‌ನ ಕೊನೆಯ ಎಸೆತದಲ್ಲಿ ಫೈನ್ ಲೆಗ್ ಕಡೆಗೆ ಬೌಂಡರಿ ಕದಿಯುವ ಪ್ರಯತ್ನ ಮಾಡಿದ್ದ ಆತಿಫ್ ಚೆಂಡನ್ನು ಗಾಳಿಗೆ ಹಾರಿಸಿದ್ದರು. ವಿಕೆಟ್‌ಕೀಪರ್ ರಹೀಮ್‌ಗೆ ಅದು ಸುಲಭದ ಕ್ಯಾಚ್ ಆಗಿದ್ದರೂ ಶಾರ್ಟ್ ಥರ್ಡ್‌ಮ್ಯಾನ್ ವಿಭಾಗದಲ್ಲಿ ಫೀಲ್ಡ್ ಮಾಡುತ್ತಿದ್ದ ನಸುಮ್ ಅಹ್ಮದ್ ಕೂಡ ಕ್ಯಾಚ್‌ಗೆ ಮುಂದಾಗಿ ರಹೀಮ್‌ಗೆ ಡಿಕ್ಕಿ ಹೊಡೆದರು. ಆದರೂ ರಹೀಮ್ ಚೆಂಡನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲರಾಗಿದ್ದರು.
ಈ ಸಂದರ್ಭದಲ್ಲಿ ನಿರ್ಣಾಯಕ ವಿಕೆಟ್ ಪಡೆಯುವ ಕ್ಯಾಚ್ ಇನ್ನೇನು ಕೈತಪ್ಪಿ ಹೋಗುತ್ತಿತ್ತಲ್ಲ ಎಂಬ ಕೋಪದಲ್ಲಿ ರಹೀಮ್ ಕೂಡಲೇ ನಸುಮ್ ಅಹ್ಮದ್ ಮೇಲೆ ಕೈ ಮಾಡಲು ಮುಂದಾದರು. ಆದರೆ ಕ್ಷಣಮಾತ್ರದಲ್ಲಿ ತಮ್ಮ ಕೋಪ ನಿಯಂತ್ರಿಸಿಕೊಂಡರು. ಜೊತೆಗೆ ಸಹ ಆಟಗಾರರು ಕೂಡ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಯಾಗಿಸಿದರು.
ಪಂದ್ಯದ ಬಳಿಕ ಮುಷ್ಫಿಕರ್ ತನ್ನ ವರ್ತನೆಗೆ ಕ್ಷಮೆ ಕೇಳಿದ್ದರಾದರೂ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಮುಷ್ಫಿಕರ್‌ಗೆ ದಂಡ ವಿಧಿಸಿದೆ.
PublicNext
16/12/2020 02:30 pm