ಸಿಡ್ನಿ: ತಂದೆಯ ಅಗಲಿಕೆಯ ನೋವಿನಲ್ಲೂ ದೇಶ ಸೇವೆಗೆ ಮೊಹಮ್ಮದ್ ಸಿರಾಜ್ ಬಯಸಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಟೀಂ ಇಂಡಿಯಾದ ಮೊಹಮ್ಮದ್ ಸಿರಾಜ್ ಆಸೀಸ್ ವಿರುದ್ಧದ ಸರಣಿಗಾಗಿ ಆಸ್ಟ್ರೇಲಿಯಾ ನೆಲದಲ್ಲಿ ಅಭ್ಯಾಸದಲ್ಲಿರುವಾಗಲೇ ತಂದೆಯನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಬಿಸಿಸಿಐ ಮೊಹಮ್ಮದ್ ಸಿರಾಜ್ ಅವರಿಗೆ ತವರಿಗೆ ಮರಳಿ ಕುಟುಂಬವನ್ನು ಸೇರಿಕೊಳ್ಳುವ ಅವಕಾಶವನ್ನು ನೀಡಿತ್ತು. ಆದರೆ ಸಿರಾಜ್ ತಂಡದ ಜೊತೆಯಲ್ಲೇ ಉಳಿದುಕೊಳ್ಳಲು ಬಯಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಸಿಸಿಐ, "ಅನಾರೋಗ್ಯದಿಂದಾಗಿ ವೇಗದ ಬೌಲರ್ ಮಹಮ್ಮದ್ ಸಿರಾಜ್ ಅವರ ತಂದೆ ಅಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಅವರೊಂದಿಗೆ ಮಾತನಾಡಿ ತವರಿಗೆ ಮರಳಿ ಕುಟುಂಬವನ್ನು ಸೇರಿಕೊಳ್ಳುವ ಅವಕಾಶವನ್ನು ನೀಡಿತ್ತು. ಆದರೆ ಅವರು ಟೀಂ ಇಂಡಿಯಾ ಜೊತೆಗೆ ಉಳಿದುಕೊಂಡು ದೇಶ ಸೇವೆ ಮಾಡಲು ನಿರ್ಧರಿಸಿದ್ದಾರೆ. ಈ ಕಠಿಣ ಸಂದರ್ಭದಲ್ಲಿ ಬಿಸಿಸಿಐ ಸಿರಾಜ್ ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ" ಎಂದು ತಿಳಿಸಿದೆ.
ಇದಕ್ಕೂ ಮುನ್ನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟ್ವೀಟ್ ಮಾಡಿ. "ಈ ದೊಡ್ಡ ನಷ್ಟವನ್ನು ಭರಿಸಿಕೊಳ್ಳಲು ಮೊಹಮ್ಮದ್ ಸಿರಾಜ್ ಅವರಿಗೆ ಸಾಕಷ್ಟು ಶಕ್ತಿ ದೊರೆಯಲಿ. ಈ ಪ್ರವಾಸದ ಯಶಸ್ಸಿಗೆ ಶುಭಹಾರೈಸುತ್ತಿದ್ದೇನೆ" ಎಂದು ಸಿರಾಜ್ ಅವರ ನಿರ್ಧಾರಕ್ಕೆ ಗೌರವಿಸಿ ಶುಭಹಾರೈಸಿದ್ದರು.
PublicNext
22/11/2020 10:46 am