ದುಬೈ: ನಾಯಕ ರೋಹಿತ್ ಶರ್ಮಾ ಅಬ್ಬರ ಬ್ಯಾಟಿಂಗ್ ಹಾಗೂ ಟ್ರೆಂಟ್ ಬೌಲ್ಟ್ ಅಮೋಘ ಬೌಲಿಂಗ್‌ನಿಂದ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಈ ಮೂಲಕ 5ನೇ ಬಾರಿಗೆ ಚಾಂಪಿಯನ್ ಟ್ರೋಫಿಗೆ ಮುತ್ತಿಟ್ಟಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಮೊದಲು ಬ್ಯಾಟಿಂಗ್ ಮಾಡಿ 157 ರನ್‌ಗಳ ಗುರಿ ನೀಡಿತ್ತು. ಟಾರ್ಗೆಟ್ ಬೆನ್ನಟ್ಟಿದ ಮುಂಬೈ 18.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 157 ರನ್ ಚಚ್ಚಿ ಗೆಲುವು ದಾಖಲಿಸಿದೆ.
ಮುಂಬೈ ಪರ ನಾಯಕ ರೋಹಿತ್ ಶರ್ಮಾ 68 ರನ್ (51 ಎಸೆತ, 5 ಬೌಂಡರಿ, 4 ಸಿಕ್ಸರ್), ಇಶಾನ್ ಕಿಶನ್ ಅಜೇಯ 33 ರನ್ (19 ಎಸೆತ, 3 ಬೌಂಡರಿ, 1 ಸಿಕ್ಸ್) ದಾಖಲಿಸಿದರು. ಉಳಿದಂತೆ ಕ್ವಿಂಟನ್ ಡಿ ಕಾಕ್ 20 ರನ್, ಸೂರ್ಯಕುಮಾರ್ ಯಾದವ್ 20 ರನ್, ಕೀರನ್ ಪೊಲಾರ್ಡ್ 9 ರನ್, ಹಾರ್ದಿಕ್ ಪಾಂಡ್ಯ 3 ರನ್ ಹಾಗೂ ಕ್ರುನಾಲ್ ಪಾಂಡ್ಯ ಅಜೇಯ 1 ರನ್ ಗಳಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ ಪಡೆ 7 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತ್ತು. ಡೆಲ್ಲಿ ಪರ ನಾಯಕ ಶ್ರೇಯಸ್ ಅಯ್ಯರ್ ಅಜೇಯ ಅತಿ ಹೆಚ್ಚು 65 ರನ್ (50 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ರಿಷಭ್ ಪಂತ್ 56 ರನ್ (38 ಎಸೆತ, 4 ಬೌಂಡರಿ, 2 ಸಿಕ್ಸರ್) ಚಚ್ಚಿದರೆ ಉಳಿದ ಆಟಗಾರರು ಬ್ಯಾಟಿಂಗ್ ವೈಫಲ್ಯ ತೋರಿದ್ದರು. ಶಿಖರ್ ಧವನ್ 15 ರನ್, ಅಜಿಂಕ್ಯಾ ರಹಾನೆ 2 ರನ್, ಶಿಮ್ರೋನ್ ಹೆಟ್ಮೇರ್ 5 ರನ್, ಅಕ್ಷರ್ ಪಟೇಲ್ 9 ರನ್ ಗಳಿಸಿದರೆ, ಆರಂಭಿಕನಾಗಿ ಮೈದಾನಕ್ಕಿಳಿದಿದ್ದ ಮಾರ್ಕಸ್ ಸ್ಟೊಯಿನಿಸ್ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿದ್ದರು.
PublicNext
10/11/2020 11:02 pm