ಅಬುಧಾಬಿ: ಭಾರೀ ಕುತೂಹಲ ಮೂಡಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 6 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಕೊಹ್ಲಿ ನೇತೃತ್ವದ ಆರ್‌ಸಿಬಿ ಐಪಿಎಲ್ 13ನೇ ಆವೃತ್ತಿಯಿಂದ ಹೊರ ಬಿದ್ದಿದೆ.
ಅಬುಧಾಬಿಯ ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2020ರ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೊಹ್ಲಿ ಪಡೆ 131 ರನ್‌ಗಳ ಸಾಧಾರಣ ಮೊತ್ತದ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ 19.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 132 ರನ್ ಚಚ್ಚಿ ಗೆದ್ದು ಬೀಗಿದೆ.
ಹೈದರಾಬಾದ್ ತಂಡದ ಪರ ಕೇನ್ ವಿಲಿಯಮ್ಸನ್ ಅಜೇಯ 50 ರನ್, ಜೇಸನ್ ಹೋಲ್ಡರ್ 24 ರನ್ ಹಾಗೂ ಕನ್ನಡಿಗ ಮನೀಷ್ ಪಾಂಡೆ 24 ರನ್ ಗಳಿಸಿದರು. ನಾಯಕ ಡೇವಿಡ್ ವಾರ್ನರ್ 17 ರನ್ ಹಾಗೂ ಪ್ರಿಯಂ ಗರ್ಗ್ 7 ರನ್ ಗಳಿಸಿ ವಿಕೆಟ್ ಕಳೆದುಕೊಂಡರೆ, ಆರಂಭಿಕ ಬ್ಯಾಟ್ಸ್‌ಮನ್ ಶ್ರೀವತ್ಸ್ ಗೋಸ್ವಾಮಿ ಒಂದೇ ಒಂದು ರನ್ ಗಳಿಸದೆ ವಿಕೆಟ್ ಒಪ್ಪಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ಪರ ಎಬಿ ಡಿವಿಲಿಯರ್ಸ್ 56 ರನ್ ಹಾಗೂ ಆ್ಯರೋನ್ ಫಿಂಚ್ 32 ರನ್ ದಾಖಲಿಸಿದ್ದರು. ಉಳಿದಂತೆ ದೇವದತ್ ಪಡಿಕ್ಕಲ್ 1 ರನ್, ನಾಯಕ ವಿರಾಟ್ ಕೊಹ್ಲಿ 6 ರನ್, ಶಿವಂ ದುಬೆ 8 ರನ್, ವಾಷಿಂಗ್ಟನ್ ಸುಂದರ್ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಮೊಯೀನ್ ಅಲಿ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡರೆ, ಕೊನೆಯಲ್ಲಿ ನವ್ದೀಪ್ ಸೈನಿ ಅಜೇಯ 9 ರನ್ ಹಾಗು ಮೊಹಮ್ಮದ್ ಸಿರಾಜ್ ಅಜೇಯ 10 ರನ್‌ಗಳ ಕೊಡುಗೆ ನೀಡಿದ್ದರು. ಈ ಮೂಲಕ ಕೊಹ್ಲಿ ಪಡೆ 7 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತ್ತು.
ಹೈದರಾಬಾದ್ ಪರ ಜೇಸನ್ ಹೋಲ್ಡರ್ ಪ್ರಮುಖ 3 ವಿಕೆಟ್ ಕಿತ್ತು ಮಿಂಚಿದರೆ, ಟಿ. ನಟರಾಜನ್ 2 ವಿಕೆಟ್, ಶಹ್ಬಾಜ್ ನದೀಂ 1 ವಿಕೆಟ್ ಕಬಳಿಸಿ ತಂಡಕ್ಕೆ ಆಸರೆಯಾದರು.
PublicNext
06/11/2020 11:14 pm