ದುಬೈ: ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ವೈಫಲ್ಯದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 57 ರನ್‌ಗಳಿಂದ ಸೋಲು ಕಂಡಿದೆ.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ರೋಹಿತ್ ಶರ್ಮಾ ಪಡೆಯು 200 ರನ್ ಚಚ್ಚಿತ್ತು. ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲು ಶಕ್ತವಾಯಿತು.
ಡೆಲ್ಲಿ ತಂಡವು ಆರಂಭದಲ್ಲೇ ಭಾರೀ ಆಘಾತಕ್ಕೆ ತುತ್ತಾಯಿತು. ಮೊದಲ ಮೂರು ವಿಕೆಟ್‌ಗೆ ತಂಡದ ಮೊತ್ತ ಕೇವಲ 3 ರನ್ ಆಗಿತ್ತು. ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ ಒಂದೇ ಒಂದು ರನ್ ಗಳಿಸಲಿಲ್ಲ. ಬಳಿಕ ಬಂದ ನಾಯಕ ಶ್ರೇಯಸ್ ಅಯ್ಯರ್ 12 ರನ್ ಹಾಗೂ ರಿಷಬ್ ಪಂತ್ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮಧ್ಯೆ ಉತ್ತಮ ಪ್ರದರ್ಶನ ನೀಡಿದ ಮಾರ್ಕಸ್ ಸ್ಟೋಯಿನಿಸ್ 65 ರನ್ ಹಾಗೂ ಆಕ್ಸಾರ್ ಪಟೇಲ್ 42 ರನ್ ದಾಖಲಿಸಿದರು. ಕೊನೆಯಲ್ಲಿ ಕಾಗಿಸೊ ರಬಾಡ ಅಜೇಯ 15 ರನ್ ಗಳಿಸಿದರು.
ಮುಂಬೈ ಪರ ಜಸ್‌ಪ್ರೀತ್ ಬೂಮ್ರಾ 4 ವಿಕೆಟ್ ಪಡೆದು ಮಿಂಚಿದರೆ, ಟ್ರೆಂಟ್ ಬೌಲ್ಟ್ 2 ವಿಕೆಟ್, ಕೀರೊನ್ ಪೊಲಾರ್ಡ್ ಹಾಗೂ ಕೃನಾಲ್ ಪಾಂಡ್ಯ ತಲಾ ಒಂದು ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ಇಶಾನ್ ಕಿಶನ್ ಅಜೇಯ 55 ರನ್, ಸೂರ್ಯಕುಮಾರ್ ಯಾದವ್ 51 ರನ್, ಹಾರ್ದಿಕ್ ಪಾಂಡ್ಯ ಅಜೇಯ 37 ರನ್ ಹಾಗೂ ಕ್ವಿಂಟನ್ ಡಿಕಾಕ್ 40 ರನ್ ಸಹಾಯದಿಂದ 5 ವಿಕೆಟ್ ನಷ್ಟಕ್ಕೆ 200 ರನ್ ಪೇರಿಸಿತ್ತು. ನಾಯಕ ರೋಹಿತ್ ಶರ್ಮಾ ಹಾಗೂ ಕೀರೊನ್ ಪೊಲಾರ್ಡ್ ಯಾವುದೇ ರನ್ ಗಳಿಸದೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ತೆರಳಿದರೆ, ಕೃನಾಲ್ ಪಾಂಡ್ಯ 13 ರನ್ ಕೊಡುಗೆ ನೀಡಿದರು. ಡೆಲ್ಲಿ ಪರ ಆರ್.ಅಶ್ವಿನ್ ಪ್ರಮುಖ ಮೂರು ವಿಕೆಟ್ ಉರುಳಿಸಿ ಮಿಂಚಿದರೆ, ಮಾರ್ಕಸ್ ಸ್ಟೋಯಿನಿಸ್ ಹಾಗು ಅನ್ರಿಕ್ ನಾರ್ಟ್ಜೆ ತಲಾ ಒಂದು ವಿಕೆಟ್ ಕಿತ್ತು ತಂಡಕ್ಕೆ ಆಸರೆಯಾದರು.
PublicNext
05/11/2020 11:17 pm