ಅಬುಧಾಬಿ: ದೀಪಕ್ ಹೂಡ ಭರ್ಜರಿ ಅರ್ಧಶತಕ, ನಾಯಕ ಕೆ.ಎಲ್.ರಾಹುಲ್, ಕ್ರಿಸ್ ಗೇಲ್ ಸೇರಿದಂತೆ ಉಳಿದ ಆಟಗಾರರ ಬ್ಯಾಟಿಂಗ್ ವೈಫಲ್ಯದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಚೆನ್ನೈ ಸೂಪರ್ ಕಿಂಗ್ಸ್‌ಗೆ 154 ರನ್‌ಗಳ ಸಾಧಾರಣ ಗುರಿ ನೀಡಿದೆ.
ಅಬುಧಾಬಿ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ನ 53ನೇ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಬೌಲಿಂಗ್ ಆಯ್ಕೆಯನ್ನು ಸಮರ್ಥಿಸಿಕೊಂಡಿದೆ. ಇತ್ತ ಬ್ಯಾಟಿಂಗ್ ಮಾಡಿದ ಪಂಜಾಬ್ ದೀಪಕ್ ಹೂಡ 62 ರನ್ (30 ಎಸೆತ, 3 ಬೌಂಡಿ, 2 ಸಿಕ್ಸರ್), ಕೆಎಲ್ ರಾಹುಲ್ 29 ರನ್ ಹಾಗೂ ಮಯಾಂಕ್ ಅಗರ್ವಾಲ್ 26 ರನ್ ಸಹಾಯದಿಂದ 6 ವಿಕೆಟ್ ನಷ್ಟಕ್ಕೆ 153 ರನ್ ಪೇರಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಪಂಜಾಬ್ ತಂಡಕ್ಕೆ ನಾಯಕ ಕೆ.ಎಲ್.ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ 5 ಓವರ್ನಲ್ಲೇ 44 ರನ್ ಚಚ್ಚಿದರು. ಆದರೆ 26 ರನ್ ಗಳಿಸಿದ್ದ ಮಯಾಂಕ್ ಎನ್ ಗಿಡಿ ಎಸೆತದಲ್ಲಿ ಬೌಲ್ಡ್ ಆಗಿ ಮೈದಾನದಿಂದ ಹೊರ ನಡೆದರು. ಈ ಬೆನ್ನಲ್ಲೇ ರಾಹುಲ್ (29 ರನ್), ನಿಕೋಲಸ ಪೂರನ್ (2 ರನ್), ಕ್ರಿಸ್ ಗೇಲ್ (12 ರನ್), ಮಂದೀಪ್ ಸಿಂಗ್ (14 ರನ್) ಹಾಗೂ ಜೇಮ್ಸ್ ನೀಶಮ್ (2 ರನ್) ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು.
ಈ ಮಧ್ಯೆ ಏಕಾಂಗಿ ಹೋರಾಟ ನಡೆಸಿದ ದೀಪಕ್ ಹೂಡ ಐಪಿಎಲ್‌ನಲ್ಲಿ ತಮ್ಮ ಎರಡನೇ ಅರ್ಧಶತಕ ಪೂರೈಸಿದರು. ಕೊನೆಯವರೆಗೂ ಹೋರಾಡಿದ ಹೂಡ ಅಜೇಯ 62 ರನ್ ಹಾಗೂ ಕೊನೆಯಲ್ಲಿ ಬಂದ ಕ್ರಿಸ್ ಜೋರ್ಡನ್ 4 ರನ್ ಚಚ್ಚಿದರು.
ಚೆನ್ನೈ ಪರ ಲುಂಗಿ ಎನ್ಗಿಡಿ 3 ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹಿರ್, ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಕಿತ್ತರು.
PublicNext
01/11/2020 05:19 pm