ದುಬೈ: ವೃದ್ಧಿಮಾನ್ ಸಹಾ, ನಾಯಕ ಡೇವಿಡ್ ವಾರ್ನರ್ ಹಾಗೂ ಕನ್ನಡಿಗ ಮನೀಷ್ ಪಾಂಡೆ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಸನ್ರೈಸರ್ಸ್ ಹೈದರಾಬಾದ್ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ಗೆ 220 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್-13ನೇ ಆವೃತ್ತಿಯ 47ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 219 ರನ್ ಚಚ್ಚಿದೆ. ಹೈದರಾಬಾದ್ ಪರ ವೃದ್ಧಿಮಾನ್ ಸಹಾ 87 ರನ್ (45 ಎಸೆತ, 12 ಬೌಂಡರಿ, 2 ಸಿಕ್ಸರ್), ಡೇವಿಡ್ ವಾರ್ನರ್ 66 ರನ್ (34 ಎಸೆತ, 8 ಬೌಂಡರಿ, 2 ಸಿಕ್ಸರ್), ಮನೀಷ್ ಪಾಂಡೆ ಅಜೇಯ 44 ರನ್ (31 ಎಸೆತ, 4 ಬೌಂಡರಿ, 1 ಸಿಕ್ಸ್) ಹಾಗೂ ಕೇನ್ ವಿಲಿಯಮ್ಸನ್ ಅಜೇಯ 11 ರನ್ (10 ಎಸೆತ, 1 ಬೌಂಡರಿ) ಬಾರಿಸಿದರು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳನ್ನ ಕಟ್ಟಿ ಹಾಕುವಲ್ಲಿ ವಿಫಲವಾಯಿತು. ಓಪನರ್ಗಳಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಹಾಗೂ ವೃದ್ಧಿಮಾನ್ ಸಹಾ ಬೌಂಡರಿ, ಸಿಕ್ಸರ್ಗಳ ಮಳೆ ಸುರಿಸಿದರು. ಈ ಜೋಡಿಯು ಮೊದಲ ವಿಕೆಟ್ ನಷ್ಟಕ್ಕೆ 107 ರನ್‌ಗಳ ಕೊಡುಗೆ ನೀಡಿತು. 10ನೇ ಓವರ್ನಲ್ಲಿ ಸಿಕ್ಸ್ ಸಿಡಿಸುವಲ್ಲಿ ಎಡವಿದ ಡೇವಿಡ್ ವಿಕೆಟ್ ಒಪ್ಪಿಸಿದರು.
ವಾರ್ನರ್ ನಿರ್ಗಮನದ ಬಳಿಕ ಶುರುವಾಗಿದ್ದು ಸಹಾ ಆಟ. ಮನೀಶ್ ಪಾಂಡೆ ಜೊತೆಸೇರಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ವೃದ್ದಿಮಾನ್ 14 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 170ಕ್ಕೆ ತಂದಿಟ್ಟು ಔಟ್ ಆದರು. ಕೊನೆಯಲ್ಲಿ ಮನೀಷ್ ಪಾಂಡೆ ಅಬ್ಬರಿಸಿದರು. ಇದರಿಂದಾಗಿ ತಂಡದ ಮೊತ್ತವು 219 ರನ್ ಆಯಿತು.
PublicNext
27/10/2020 09:10 pm