ದುಬೈ: ಐಪಿಎಲ್ 13ನೇ ಆವೃತ್ತಿಯ ಭಾಗವಾಗಿ ಇಂದು ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕಪಟ್ಟಿಯ ತಳ ಮಟ್ಟದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವ ಆರ್‌ಸಿಬಿ ಪಡೆಯು ಹಸಿರು ಪೋಷಾಕು ಧರಿಸಿ ಇಂದು ಕಣಕ್ಕಿಳಿಯಲಿದೆ.
ಪರಿಸರ ಸಂರಕ್ಷಣೆ ಹಾಗೂ ತ್ಯಾಜ್ಯಗಳ ಮರುಬಳಕೆಗೆ ಒತ್ತು ನೀಡುವ ಉದ್ದೇಶದಿಂದ ಕುರಿತು ಸಂದೇಶ ನೀಡಲು ಆರ್‌ಸಿಬಿ ಆಟಗಾರರು ಹಸಿರು ಪೋಷಾಕು ಧರಿಸಿ ಕಣಕ್ಕಿಳಿಯಲಿದ್ದಾರೆ. 2011ರಲ್ಲಿ ಮೊದಲ ಬಾರಿ ತಂಡವು ಗ್ರೀನ್ ಜರ್ಸಿಯಲ್ಲಿ ಆಟವಾಡಿತ್ತು. ಅದಾದ ಬಳಿಕ ಪ್ರತಿ ವರ್ಷ ಫ್ರಾಂಚೈಸಿ ಈ ಅಭಿಯಾನವನ್ನು ಮುಂದುವರಿಸಿಕೊಂಡು ಬಂದಿದೆ.
ಈ ಸಂಬಂಧ ಎಬಿ ಡಿವಿಲಿಯರ್ಸ್, ಆ್ಯರನ್ ಫಿಂಚ್ ಮತ್ತು ವಾಷಿಂಗ್ಟನ್ ಸುಂದರ್ ಮಾತನಾಡಿರುವ ವಿಡಿಯೋವನ್ನು ಶನಿವಾರ ಆರ್‌ಸಿಬಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ವಿಡಿಯೋ ಪ್ರಕಟಿಸಿದೆ. ’ನಾವು ವಾಸಿಸುವ ಭೂಮಿಯ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ನೀರು, ವಿದ್ಯುತ್ ಮಿತಬಳಕೆ, ಕಸ ವಿಲೇವಾರಿಯಲ್ಲಿ ಶಿಸ್ತು ಮತ್ತು ಸರಳ ಜೀವನದ ಮೂಲಕ ಪರಿಸರಕ್ಕೆ ನಾವು ಕಾಣಿಕೆ ನೀಡಬಹುದು. ಅದಕ್ಕೆ ಪ್ರತಿಯಾಗಿ ಮಾನವಕುಲಕ್ಕೂ ಒಳ್ಳೆಯದಾಗುತ್ತದೆ‘ ಎಂದು ಆಟಗಾರರು ಹೇಳಿದ್ದಾರೆ.
PublicNext
25/10/2020 02:08 pm