ನವದೆಹಲಿ : ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಏಕದಿನ ವಿಶ್ವಕಪ್ ವಿಜೇತ ನಾಯಕ 61 ವರ್ಷದ ಕಪಿಲ್ ದೇವ್ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಅವರ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಈ ಕುರಿತು ಪತ್ರಕರ್ತೆ ಟೀನಾ ಠಾಕೂರ್ ಟ್ವಿಟರ್ ಮಾಡಿದ್ದು, ಪ್ರಸಿದ್ಧ ಕ್ರಿಕೆಟಿಗ ಕಪಿಲ್ ದೇವ್ ಅವರಿಗೆ ಹೃದಯಾಘಾತವಾಗಿದ್ದು, ದೆಹಲಿಯ ಆಸ್ಪತ್ರೆಯಲ್ಲಿ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದಾರೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಕಪಿಲ್ ದೇವ್ ಒಂದು ದಶಕಕ್ಕೂ ಹೆಚ್ಚು ಕಾಲ ಟೀಂ ಇಂಡಿಯಾ ಪರ ಆಡಿದ್ದಾರೆ. ಅವರು ಅಕ್ಟೋಬರ್ 1, 1978 ರಂದು ಕ್ವೆಟ್ಟಾದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಆ ತಿಂಗಳ ಕೊನೆಯಲ್ಲಿ ಫೈಸಲಾಬಾದ್‌ನಲ್ಲಿ ಟೆಸ್ಟ್ ಚೊಚ್ಚಲ ಪ್ರವೇಶ ಮಾಡಿದ್ದರು.
ಕಪಿಲ್ ದೇವ್ ಟೀಂ ಇಂಡಿಯಾ ಪರ 131 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 434 ವಿಕೆಟ್ ಪಡೆದಿದ್ದಷ್ಟೇ ಅಲ್ಲದೆ 5,248 ರನ್ ಗಳಿಸಿದ್ದಾರೆ. 225 ಏಕದಿನ ಪಂದ್ಯಗಳಲ್ಲಿ 3,783 ರನ್ ಗಳಿಸಿದ್ದು, 253 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 1983ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದ ಕಪಿಲ್ ದೇವ್ ಭಾರತವನ್ನು ಚಾಂಪಿಯನ್ ತಂಡವಾಗಿ ಮಾಡಿದ್ದರು.
PublicNext
23/10/2020 02:40 pm