ಬೆಂಗಳೂರು: ಬೆಂಗಳೂರಿನ ನೀರಿನಲ್ಲೇ ಆ ಗುಣವಿದೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಸುನಿಲ್ ಗಾವಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್ ಸೇರಿದಂತೆ ಕರ್ನಾಟಕದ ಕ್ರಿಕೆಟಿಗರು ಗಮನಾರ್ಹ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನದೊಂದಿಗೆ ಗಮನ ಸೆಳೆಯುತ್ತಿದ್ದಾರೆ. ಕೆ.ಎಲ್ ರಾಹುಲ್ 500ಕ್ಕೂ ಅಧಿಕ ರನ್ ಸಿಡಿಸಿ ಆರೆಂಜ್ ಕ್ಯಾಪ್ ಒಡೆಯರಾಗಿದ್ದರೆ. ಕೆಕೆಆರ್ ತಂಡದಲ್ಲಿ ಯುವ ವೇಗಿ ಪ್ರಸಿದ್ಧಕೃಷ್ಣ ಮಿಂಚುತ್ತಿದ್ದರೆ, ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಶ್ರೇಯಸ್ ಗೋಪಾಲ್ ಉತ್ತಮ ಬೌಲಿಂಗ್ ಪ್ರದರ್ಶಿಸುತ್ತಿದ್ದಾರೆ.
ಪಂಜಾಬ್ ಮತ್ತು ಮುಂಬೈ ನಡುವಿನ ಪಂದ್ಯಕ್ಕೆ ಮುನ್ನ ಕೆ.ಎಲ್.ರಾಹುಲ್ ಬ್ಯಾಟಿಂಗ್ ನಿರ್ವಹಣೆಯ ಬಗ್ಗೆ ಸಹ-ವಿಶ್ಲೇಷಕರು ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಯಿಸುತ್ತ ಗಾವಸ್ಕರ್, ‘ಅದು ಬೆಂಗಳೂರಿನ ನೀರಿನಲ್ಲೇ ಇದೆ. ಬೆಂಗಳುರು ಹಲವು ವಿಶ್ವ ದರ್ಜೆಯ ಕ್ರೀಡಾಪಟುಗಳನ್ನು ಹುಟ್ಟುಹಾಕಿದೆ. ಕ್ರಿಕೆಟ್ ಮಾತ್ರವಲ್ಲ, ಹಲವಾರು ಕ್ರೀಡೆಗಳಲ್ಲಿ ಇದನ್ನು ಕಾಣಬಹುದು' ಎಂದು ಮೆಚ್ಚುಗೆಯ ಮಾತನ್ನು ಆಡಿದ್ದಾರೆ.
'ನನ್ನ ಸಾರ್ವಕಾಲಿಕ ನೆಚ್ಚಿನ ಭಾರತೀಯ ಕ್ರೀಡಾಪಟು ಪ್ರಕಾಶ್ ಪಡುಕೋಣೆ, ಗುಂಡಪ್ಪ ವಿಶ್ವನಾಥ್, ಎರ‌್ರಪಳ್ಳಿ ಪ್ರಸನ್ನ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಸೇರಿದಂತೆ ಹಲವಾರು ವಿಶ್ವದರ್ಜೆಯ ಕ್ರೀಡಾಪಟುಗಳನ್ನು ಬೆಂಗಳೂರು ರೂಪಿಸಿದೆ. ಹೀಗಾಗಿ ಆ ಗುಣ ಬೆಂಗಳೂರಿನ ನೀರಿನಲ್ಲೇ ಇದೆ ಎನ್ನಬಹುದು’ ಎಂದು ಗವಾಸ್ಕರ್ ಹೇಳಿದ್ದಾರೆ.
PublicNext
22/10/2020 08:43 pm