ಅಬುಧಾಬಿ: ಅದ್ಬುತ ಬೌಲಿಂಗ್ ಹಾಗೂ ಬ್ಯಾಟಿಂಗ್ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.
ಅಬುಧಾಬಿಯ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 39ನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ತೋರಿದ ಕೋಲ್ಕತ್ತಾ 84 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿತ್ತು. ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ 39 ಎಸೆತಗಳು ಬಾಕಿ ಇರುವಂತೆ 2 ವಿಕೆಟ್ ನಷ್ಟಕ್ಕೆ 85 ರನ್ ಚಚ್ಚಿ ಗೆದ್ದು ಬೀಗಿದೆ. ಈ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಪಡೆ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದೆ.
ಆರ್‌ಸಿಬಿ ಪರ ದೇವದತ್ತ ಪಡೀಕಲ್ 25 ರನ್, ವಿರಾಟ್ ಕೊಹ್ಲಿ ಅಜೇಯ 18 ರನ್, ಗುರುಕೀರತ್ ಮನ್ ಸಿಂಗ್ ಅಜೇಯ 21 ರನ್ ಹಾಗೂ ಆ್ಯರೋನ್ ಫಿಂಚ್ 16 ರನ್ ಗಳಿಸಿದರು.
ಇದಕ್ಕೂ ಮುನ್ನ ಕೋಲ್ಕತ್ತಾ ತಂಡವು 8 ವಿಕೆಟ್ ನಷ್ಟಕ್ಕೆ ಕೇವಲ 84 ರನ್ ಪೇರಿಸಿತ್ತು. ತಂಡದ ಪರ ನಾಯಕ ಇಯಾನ್ ಮಾರ್ಗನ್ 30 ರನ್ (34 ಎಸೆತ, 3 ಬೌಂಡರಿ, 1 ಸಿಕ್ಸ್) ಹೊರತುಪಡಿಸಿ ಉಳಿದ ಎಲ್ಲ ಆಟಗಾರರು 20 ರನ್‌ಗಳ ಗಡಿ ದಾಟುವಲ್ಲಿ ವಿಫಲರಾಗಿದ್ದರು. ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆದು ಮಿಂಚಿದರೆ, ಯಜುವೇಂದ್ರ ಚಹಲ್ 2 ವಿಕೆಟ್, ನವದೀಪ್ ಸೈನಿ ಹಾಗೂ ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು.
PublicNext
21/10/2020 10:30 pm