ಅಬುಧಾಬಿ: ಆರಂಭದಲ್ಲಿಯೇ ಮುಗ್ಗರಿಸಿದ ತಂಡಕ್ಕೆ ನಾಯಕ ಎಂ.ಎಸ್.ಧೋನಿ ಹಾಗೂ ರವೀಂದ್ರ ಜಡೇಜಾ ಆಸರೆಯಾದ ಪರಿಣಾಮ ಚೆನ್ನೈ ಸೂಪರ್ ಕಿಂಗ್ಸ್ ಎದುರಾಳಿ ರಾಜಸ್ಥಾನ್ ರಾಯಲ್ಸ್‌ಗೆ 126 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿದೆ.
ಅಬುಧಾಬಿ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯ 37ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 5 ವಿಕೆಟ್ ನಷ್ಟಕ್ಕೆ 125 ರನ್‌ಗಳನ್ನು ಪೇರಿಸಿದೆ. ತಂಡದ ಪರ ರವೀಂದ್ರ ಜಡೇಜಾ ಅಜೇಯ 35 ರನ್ (30 ಎಸೆತ, 4 ಬೌಂಡರಿ) ಹಾಗೂ ಎಂ.ಎಸ್.ಧೋನಿ 28 ರನ್ ( 28 ಎಸೆತ, 2 ಬೌಂಡರಿ) ಗಳಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಚೆನ್ನೈ ತಂಡವು ಮತ್ತೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಓಪನರ್ ಆಗಿ ಸ್ಯಾಮ್ ಕುರ್ರನ್ ಜೊತೆ ಕಣಕ್ಕಿಳಿದ ಫಾಪ್ ಡುಪ್ಲೆಸಿಸ್ ಕೇವಲ 10 ರನ್ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಶೇನ್ ವಾಟ್ಸನ್ (8 ರನ್), ಕುರ್ರನ್ (22 ರನ್) ಹಾಗೂ ಅಂಬಟಿ ರಾಯುಡು (13 ರನ್) ಬಹುಬೇಗ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಈ ಮೂಲಕ 56 ರನ್ ಆಗುವ ಹೊತ್ತಿಗೆ ಚೆನ್ನೈ ತಂಡ ತನ್ನ 4 ಪ್ರಮುಖ ವಿಕೆಟ್ ಕಳೆದುಕೊಂಡಿತ್ತು.
ಬಳಿಕ ಕ್ರೀಸ್ನಲ್ಲಿ ರವೀಂದ್ರ ಜಡೇಜಾ ಹಾಗೂ ನಾಯಕ ಎಂ ಎಸ್ ಧೋನಿ ತಂಡಕ್ಕೆ ಆಸರೆಯಾದರು. ಈ ಜೋಡಿ 5ನೇ ವಿಕೆಟ್ ನಷ್ಟಕ್ಕೆ 51 ರನ್‌ಗಳ ಕೊಡುಗೆ ನೀಡಿತು.
PublicNext
19/10/2020 09:17 pm