ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಣ 13ನೇ ಆವೃತ್ತಿ ಐಪಿಎಲ್ನ 35ನೇ ಪಂದ್ಯ ಟೈ ಆಗಿದೆ.
ಹೀಗಾಗಿ ಸೂಪರ್ ಓವರ್ ನಡೆಯಲಿದೆ.
ಕೆಕೆಆರ್ ನೀಡಿದ್ದ 164 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ಸ್ಫೋಟಕ ಆರಂಭ ಪಡೆದುಕೊಂಡಿತಾದರೂ ಬಳಿಕ ದಿಢೀರ್ ಕುಸಿತ ಕಂಡಿತು.
ಓಪನರ್ಗಳಾಗಿ ಕಣಕ್ಕಿಳಿದ ಕೇನ್ ವಿಲಿಯಮ್ಸನ್ ಹಾಗೂ ಜಾನಿ ಬೈರ್ಸ್ಟೋ ಬಿರುಸಿನ ಬ್ಯಾಟಿಂಗ್ ನಡೆಸಿದರು.
ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡ ಇವರು, 5 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 50ರ ಅಂಚಿಗೆ ತಂದಿಟ್ಟಿರು.
ಆದರೆ, 7ನೇ ಓವರ್ ನಲ್ಲಿ ಕೇನ್ ವಿಲಿಯಮ್ಸನ್ (19 ಬಾಲ್, 29 ರನ್) ಔಟ್ ಆದರು.
ಬಂದ ಬೆನ್ನಲ್ಲೇ ಪ್ರಿಯಂ ಗರ್ಗ್(4) ನಿರ್ಗಮಿಸಿದರು. ಚೆನ್ನಾಗಿಯೇ ಆಡುತ್ತಿದ್ದ ಬೈರ್ ಸ್ಟೋ ಕೂಡ 28 ಎಸೆತಗಳಲ್ಲಿ 36 ರನ್ ಬಾರಿಸಿ ಔಟ್ ಆದರೆ ಮನೀಶ್ ಪಾಂಡೆ ಆಟ 6 ರನ್ಗೆ ಅಂತ್ಯವಾಯಿತು.
ಹೀಗೆ 57 ರನ್ಗೆ ಮೊದಲ ವಿಕೆಟ್ ಕಳೆದುಕೊಂಡ ಹೈದರಾಬಾದ್ 82 ರನ್ ಆಗುವ ಹೊತ್ತಿಗೆ 4 ವಿಕೆಟ್ ಕೈಚೆಲ್ಲಿತು.
ವಾರ್ನರ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟಲು ಹೊರಟ ವಿಜಯ್ ಶಂಕರ್ 7 ರನ್ಗೆ ಔಟ್ ಆದರು. ಅಂತಿಮ ಹಂತದಲ್ಲಿ ಅಬ್ಧುಲ್ ಸಮದ್(23) ಜೊತೆಗೂಡಿ ವಾರ್ನರ್ ಗೆಲುವಿಗೆ ಹೋರಾಟ ನಡೆಸಿದರು.
ಕೊನೆಯ ಓವರ್ ನಲ್ಲಿ ಗೆಲ್ಲಲು 19 ರನ್ಗಳ ಅವಶ್ಯಕತೆಯಿತ್ತು. ರಸೆಲ್ ಬೌಲಿಂಗ್ ನಲ್ಲಿ ವಾರ್ನರ್ ಬೌಂಡರಿಗಳ ಮಳೆ ಸುರಿಸಿದರು.
ಕೊನೆಯ ಎಸೆತದಲ್ಲಿ 2 ರನ್ಗಳ ಅವಶ್ಯಕತೆಯಿತ್ತು. ಕ್ರೀಸ್ ನಲ್ಲಿದ್ದ ವಾರ್ನರ್ ಒಂದು ರನ್ ಕಲೆಹಾಕಷ್ಟೇ ಶಕ್ತವಾಗಿ ಪಂದ್ಯ ಟೈ ಆಯಿತು.
PublicNext
18/10/2020 07:34 pm