ಶಾರ್ಜಾ: ಯುವ ಆಟಗಾರ ಪೃಥ್ವಿ ಶಾ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಬೌಂಡರಿ, ಸಿಕ್ಸರ್ ಸುರಿಮಳೆಯಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ಗೆ 229 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ನ 16ನೇ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಶ್ರೇಯಸ್ ಅಯ್ಯರ್ ಔಟಾಗದೆ 88 ರನ್ ( 38 ಎಸೆತ, 7 ಬೌಂಡರಿ, 6 ಸಿಕ್ಸರ್), ಪೃಥ್ವಿ ಶಾ 66 ರನ್ (41 ಎಸೆತ, 4 ಬೌಂಡರಿ, 4 ಸಿಕ್ಸರ್) ಹಾಗೂ ರಿಷಬ್ ಪಂತ್ 38 ರನ್ (15 ಎಸೆತ, 5 ಬೌಂಡರಿ, 1 ಸಿಕ್ಸ್) ಸಹಾಯದಿಂದ 4 ವಿಕೆಟ್ ನಷ್ಟಕ್ಕೆ 228 ರನ್ ದಾಖಲಿಸಿದೆ.
ಡೆಲ್ಲಿ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ತಂಡಕ್ಕೆ ರನ್ ತಂದುಕೊಟ್ಟರು. ಪವರ್ ಪ್ಲೇ ಓವರಿನಲ್ಲೇ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಆದರೆ 6ನೇ ಓವರ್ನಲ್ಲಿ ಚೆನ್ನಾಗಿಯೆ ಆಡುತ್ತಿದ್ದ ಧವನ್ 26 ರನ್ ಗಳಿಸಿ ಔಟ್ ಆದರು. ಬಳಿಕ ನಾಯಕ ಶ್ರೇಯಸ್ ಅಯ್ಯರ್ ಜೊತೆಗೂಡಿದ ಪೃಥ್ವಿ ಶಾ ಅಮೋಘ ಆಟವಾಡಿದರು. ಕೇವಲ 41 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ 66 ರನ್ ಚಚ್ಚಿದರು.
PublicNext
03/10/2020 09:29 pm