ಶಿವಮೊಗ್ಗ: ದೇವರ ಭಜನೆಯಿಂದ ಉತ್ತಮ ಸಂಸ್ಕಾರ ಸಿಗುವುದರ ಜೊತೆಗೆ ಮಾನಸಿಕ ನೆಮ್ಮದಿ ಮತ್ತು ಸಮಸ್ಯೆಗೆ ಪರಿಹಾರ ಲಭ್ಯ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಇಂದು ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಶಿವಮೊಗ್ಗ-2 ಸಾಮೂಹಿಕ ಶ್ರೀ ಸತ್ಯನಾರಾಯಣ ಸಮಿತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಶಿವಮೊಗ್ಗ ಬಿ.ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ದಂಪತಿ ಮಾರ್ಗದರ್ಶನದಲ್ಲಿ ಹಮ್ಮಿಕೊಂಡ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೂಲಿ ಕೆಲಸ ಮಾಡುವ ಜನಸಾಮಾನ್ಯನಿಂದ ಹಿಡಿದು ಪ್ರಧಾನಿ ಮೋದಿಯವರೆಗೆ ಸಂಕಷ್ಟ ಎಂಬುದು ಯಾರನ್ನೂ ಬಿಟ್ಟಿಲ್ಲ. ಭಗವಂತನ ಸಾನಿಧ್ಯ ಪಡೆಯಬೇಕಾದರೆ ಭಜನೆಯಿಂದ ಮಾತ್ರ ಸಾಧ್ಯ. ಪ್ರತಿಯೊಂದು ಸಂಸಾರದಲ್ಲಿ ನೂರಾರು ಸಮಸ್ಯೆಗಳಿರುತ್ತವೆ. ವಾರದಲ್ಲಿ ಕನಿಷ್ಟ ಒಮ್ಮೆಯಾದ್ರೂ ಮನೆ ದೇವರ ಸ್ಮರಣೆ ಮಾಡಬೇಕು. ಮಂಜುನಾಥ ಸ್ವಾಮಿ ಮತ್ತು ಸತ್ಯನಾರಾಯಣ ಸ್ವಾಮಿಯ ಆಶೀರ್ವಾದದ ಜೊತೆಗೆ ಸಮಸ್ಯೆಗಳ ಪರಿಹಾರಕ್ಕೆ ಮತ್ತು ದುಶ್ಚಟಗಳಿಂದ ದೂರವಾಗಲು ಸಂಸ್ಕಾರವಂತ ಮನುಷ್ಯನಾಗಲು, ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳಬೇಕು. ದೇವರ ಭಜನೆಯಲ್ಲಿ ಪಾಲ್ಗೊಳ್ಳಬೇಕು ಎಂದರು. ಮನೆಯ ಹೆಣ್ಣು ಮಕ್ಕಳು ಸಂಸಾರದ ಜವಾಬ್ದಾರಿ ಹೊತ್ತಿರುತ್ತಾರೆ. ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಲ್ಲಿ ಅವರು ದುಶ್ಚಟಗಳಿಂದ ದೂರವಾಗಿ, ಕುಟುಂಬ ನಿರ್ವಹಣೆಯಲ್ಲೂ ಪಾಲ್ಗೊಂಡು ಉತ್ತಮ ಪ್ರಜೆಯಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು, ಶಬರೀಶ್ ಕಣ್ಣನ್ ಮತ್ತಿತರರಿದ್ದರು.
PublicNext
11/10/2022 09:55 pm