ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಪಣದಲ್ಲಿ ನಮ್ಮ ಪಕ್ಷವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರ ನೇತೃತ್ವದಲ್ಲಿ ದೇಶ ಸುಭದ್ರವಾಗುತ್ತಾ, ಅಭಿವೃದ್ಧಿಯಾಗುತ್ತಿದೆ. ಹೀಗಾಗಿ, ಬಿಜೆಪಿಯ ತತ್ವ, ಸಿದ್ಧಾಂತ ಹಾಗೂ ಮೋದಿಯವರ ನಾಯಕತ್ವ ಮೆಚ್ಚಿ ಬೇರೆ ಪಕ್ಷದ ಅನೇಕ ಮುಖಂಡರು ನಮ್ಮ ಪಕ್ಷಕ್ಕೆ ಸೇರುತ್ತಿದ್ದಾರೆ. ಇನ್ನೂ ಹಲವು ಮುಖಂಡರು ಬಿಜೆಪಿ ಸೇರುವ ಚಿಂತನೆಯಲ್ಲಿದ್ದಾರೆ. ಇವರುಗಳೆಲ್ಲಾ ಸೇರಿದ ನಂತರ ನಮಗೆ ಮತ್ತಷ್ಟು ಬಲ ಬರುತ್ತದೆ ಎಂದರು.
ಪಕ್ಷಕ್ಕೆ ಸೇರುವ ಮುಖಂಡರಿಗೆ ಅವರ ಅನುಭವ, ಅರ್ಹತೆ ಆಧಾರದಲ್ಲಿ ಸೂಕ್ತ ಸ್ಥಾನಮಾನ ನೀಡಲು ಪಕ್ಷದಲ್ಲಿ ಚಿಂತನೆ ನಡೆದಿದ್ದು, ಎಲ್ಲರೊಂದಿಗೆ ಚರ್ಚಿಸಿ, ಇದನ್ನು ಮಾಡಲಾಗುತ್ತದೆ ಎಂದರು. ವಿವಿಧ ಪಕ್ಷಗಳ ಅನೇಕ ಮುಖಂಡರು ಯಾವುದೇ ಷರತ್ತಿಲ್ಲದೇ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದು ಎಲ್ಲರನ್ನೂ ಸ್ವಾಗತಿಸುತ್ತೇನೆ ಎಂದರು.
ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಬಿ.ಎಸ್.ವೈ., ಆರ್‍ಎಸ್‍ಎಸ್ ವಿರುದ್ಧ ಅನವಶ್ಯಕವಾಗಿ ಮಾತನಾಡುವ ಮಾಜಿ ಸಿಎಂ ಸಿದ್ದರಾಮಯ್ಯಗೆ ತಲೆ ಕೆಟ್ಟಿದೆ ಎಂದು ಕುಟುಕಿದರು. ಸಿದ್ಧರಾಮಯ್ಯಗೆ ತಲೆ ಕೆಟ್ಟಿದೆ. ಯಾಕೋ ಇತ್ತೀಚೆಗೆ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರುಗಳೂ ಸಹ ಆರ್‍ಎಸ್‍ಎಸ್‍ನಿಂದ ಬಂದವರು. ರಾಷ್ಟ್ರಪತಿಯಾಗಿದ್ದ ರಾಮನಾಥ್ ಕೋವಿಂದ್ ಮತ್ತು ನಾವೆಲ್ಲರೂ ಕೂಡ ಸಂಘ ಪರಿವಾರದಿಂದಲೇ ಬಂದವರು. ಸಂಘದ ಬಗ್ಗೆ ಸರಿಯಾಗಿ ತಿಳಿಯದೇ ಮಾತನಾಡುವುದು ಸಿದ್ದರಾಮಯ್ಯನವರಿಗೆ ಶೋಭೆ ತರುವಂತಹದ್ದಲ್ಲ ಎಂದು ಕಿಡಿ ಕಾರಿದರು.
PublicNext
29/09/2022 06:10 pm