ಶಿವಮೊಗ್ಗ : ಪಿಎಫ್ಐ, ಎಸ್.ಡಿ.ಪಿ.ಐ. ನಂತಹ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಹಿಂದೂ ಜನ ಜಾಗೃತಿ ಸಮಿತಿ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಹಿಂದೂಗಳ ಮೇಲೆ ಜಿಹಾದಿ ಚಟುವಟಿಕೆಗಳು ಹೆಚ್ಚುತ್ತಿವೆ. ಈ ಚಟುವಟಿಕೆಗಳಿಗೆ ವಿದೇಶದಿಂದ ಕೂಡ ಹಣ ಬರುತ್ತಿದೆ. ಹಲವರು ಈ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇವರ ಅಟ್ಟಹಾಸ ಮಿತಿಮೀರಿದೆ. ರಾಷ್ಟ್ರಾದ್ಯಂತ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿವೆ. ಇಂತಹ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು. ತೆಲಂಗಾಣ ಶಾಸಕ ಟಿ. ರಾಜಾಸಿಂಹ ಅವರಿಗೆ ಕೊಲೆ ಬೆದರಿಕೆಯನ್ನೊಡ್ಡುವವರ ಮೇಲೆ ಕಠೋರ ಕಾರ್ಯಾಚರಣೆ ನಡೆಸಬೇಕು. ಅವರನ್ನು ಉದ್ದೇಶಪೂರ್ವಕವಾಗಿ ಬಂಧಿಸಲಾಗಿದೆ. ಈ ಘಟನೆಯಲ್ಲಿ ತೆಲಂಗಾಣ ಸರ್ಕಾರದಿಂದ ನ್ಯಾಯ ಸಿಗುವ ಸಾಧ್ಯತೆ ಕಡಿಮೆ ಇದೆ. ಇವರ ಕೇಸ್ ಗಳನ್ನು ಕರ್ನಾಟಕ ಅಥವಾ ನೆರೆಯ ರಾಜ್ಯಗಳಿಗೆ ಹಸ್ತಾಂತರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿರುವ ಇಂತಹ ಮುಸ್ಲಿಂ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಲ್ಲದೇ, ಯುಎಪಿಎ ಅಡಿಯಲ್ಲಿ ಕೇಸ್ ದಾಖಲಿಸಬೇಕು. ಹಿಂದೂಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಅಂತರರಾಷ್ಟ್ರೀಯ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
PublicNext
27/09/2022 08:11 pm