ಶಿವಮೊಗ್ಗ: ವಿದ್ಯುಚ್ಛಕ್ತಿ ಕ್ಷೇತ್ರ ಖಾಸಗೀಕರಣಗೊಳಿಸಿ ರೈತರ ಐಪಿ ಸೆಟ್‌ಗಳಿಗೆ ಮೀಟರ್ ಅಳವಡಿಸಲು ಹುನ್ನಾರ ನಡೆಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಇಂದು ನೂರಾರು ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ರೈತರು, ಆಹಾರ ಉತ್ಪಾದನೆಗಾಗಿ ಮತ್ತು ವ್ಯವಸಾಯ ಭೂಮಿಯ ನೀರಾವರಿಗಾಗಿ ಸುಮಾರು 25 ಲಕ್ಷಕ್ಕೂ ಅಧಿಕ ಐಪಿ ಸೆಟ್‌ಗಳನ್ನು ಬಳಸುತ್ತಿದ್ದು, ಇದಕ್ಕಾಗಿ ರೈತರು ಕೋಟ್ಯಂತರ ರೂ. ಸಾಲವಾಗಿ ಪಡೆದು ಬಂಡವಾಳ ಹೂಡಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ರೈತರೇ ಸ್ವಂತ ಇಚ್ಛಾಶಕ್ತಿಯಿಂದ ಮಾಡಿ ಲಕ್ಷಾಂತರ ಹೆಕ್ಟೇರ್ ವ್ಯವಸಾಯ ಭೂಮಿಯನ್ನು ನೀರಾವರಿ ಮಾಡುತ್ತಿದ್ದೇವೆ. ಆದರೆ, ಭಾರತ ಸರ್ಕಾರ ಈಗಾಗಲೇ ವಿದ್ಯುತ್ ಚ್ಛಕ್ತಿ ಖಾಸಗೀಕರಣ ಬಿಲ್ ಅನ್ನು ಸಂಸತ್ ನಲ್ಲಿ ಮಂಡಿಸಿದ್ದು, ಕೇಂದ್ರ ಸರ್ಕಾರ ವಿದ್ಯು ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಿ ವಿದ್ಯುತ್ ಉತ್ಪಾದನೆ, ದರ ನಿಗದಿ ಹಾಗೂ ಸೇವಾ ವಲಯವನ್ನು ಬಂಡವಾಳಶಾಹಿಗಳಿಗೆ ಕೊಟ್ಟು ರೈತರ ಮರಣಶಾಸಲ ಬರೆಯಲು ಮುಂದಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತರು ವ್ಯವಸಾಯ ಭೂಮಿಯ ನೀರಾವರಿಗಾಗಿ ಹಾಕಿರುವ ಐಪಿ ಸೆಟ್‌ಗಳಿಗೆ ಮೀಟರ್ ಅಳವಡಿಸಲು ಕಾನೂನಿನಲ್ಲಿ ಅವಕಾಶ ಮಾಡಿಕೊಡುತ್ತದೆ. ರಾಜ್ಯದ ಅತಿದೊಡ್ಡ ಆಹಾರ ಭದ್ರತೆ ಮತ್ತು ಉದ್ಯೋಗ ಭದ್ರತೆ ರಕ್ಷಣೆ ಮಾಡಿರುವ ಖುಷ್ಕಿ ಜಮೀನು ಹಾಗೂ ಬಯಲು ಸೀಮೆಯ ರೈತರ ಹೊಲಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ವಿದ್ಯುತ್ ಚ್ಛಕ್ತಿ ಇಲಾಖೆ ಖಾಸಗೀಕರಣಗೊಳಿಸಲು ರಾಜ್ಯ ಸರ್ಕಾರದ ಮಂತ್ರಿ ಮಂಡಲ ಇದಕ್ಕೆ ಒಪ್ಪಬಾರದು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರ 2013ರಲ್ಲಿ ಜಾರಿಗೆ ತಂದ ಭೂಸ್ವಾಧೀನ ಕಾಯ್ದೆಗೆ ಬದ್ಧರಾಗಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿಲ್ಲ. ರಾಜ್ಯದಲ್ಲಿ ನಿರ್ಮಿಸುತ್ತಿರುವ ಹೆದ್ದಾರಿಗಳಿಗೆ ಕಡ್ಡಾಯವಾಗಿ ಸ್ಥಳೀಯ ಸೇವಾ ರಸ್ತೆಗಳನ್ನು ಹೆದ್ದಾರಿ ನಿರ್ಮಾಣದ ಜೊತೆಯಲ್ಲಿಯೇ ಮಾಡಬೇಕು. ಬಗರ್ ಹುಕುಂ ರೈತರ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಕೆ.ಟಿ. ಗಂಗಾಧರ್, ಯಶವಂತರಾವ್ ಘೋರ್ಪಡೆ, ಹೆಚ್. ಜಯಪ್ಪಗೌಡ, ಡಿ.ವಿ. ವೀರೇಶ್, ವಿಜಯಕುಮಾರ್ ಪಾಟೀಲ್, ಪರಮೇಶ್ವರಪ್ಪ, ಕೆ.ಎಸ್. ಪುಟ್ಟಪ್ಪ, ಜಿ.ಆರ್. ಸಣ್ಣರಂಗಪ್ಪ, ಸೀನಪ್ಪ, ಕೆ.ಹೆಚ್. ಪಾಂಡುರಂಗಪ್ಪ, ಗೋಪಾಲಪ್ಪ, ಜಗದೀಶ್ ನಾಯ್ಕ್ ಮೊದಲಾದವರಿದ್ದರು.
PublicNext
27/09/2022 08:58 am