ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಶಂಕಿತ ಉಗ್ರರಿಬ್ಬರ ಬಂಧನ; ಬಂಧಿತರಿಂದ ಬಾಂಬ್ ತಯಾರಿಕೆಯ ವಸ್ತುಗಳು ವಶಕ್ಕೆ: ಎಸ್.ಪಿ. ಲಕ್ಷ್ಮಿಪ್ರಸಾದ್ ಹೇಳಿಕೆ

ಶಿವಮೊಗ್ಗ : ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಇಬ್ಬರು ಶಂಕಿತ ಉಗ್ರರನ್ನು ವಶಕ್ಕೆ ಪಡೆದ್ದು, ಬಂಧಿತರಿಂದ ಒಂದು ಕಾರ್, ಎರಡು ಲ್ಯಾಪ್ ಟ್ಯಾಪ್ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಉಪಯೋಗಿಸುತ್ತಿದ್ದ, ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್ ಹೇಳಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.15 ರಂದು ಶಿವಮೊಗ್ಗ ನಗರದಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನ ಮೇಲೆ ಮುಸ್ಲಿಂ ಯುವಕರು ಚಾಕುವಿನಿಂದ ಹಲ್ಲೆ ಮಾಡಿ ಕೊಲ್ಲಲು ಪ್ರಯತ್ನಿಸಿದ್ದು, ಈ ಕುರಿತಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖಾ ಕಾಲದಲ್ಲಿ 4 ಜನ ಆರೋಪಿತರನ್ನು ದಸ್ತಗಿರಿ ಮಾಡಲಾಗಿತ್ತು. ನಂತರ ತನಿಖೆ ಮುಂದುವರೆದು ಸದರಿ ಪ್ರಕರಣದಲ್ಲಿ ತೀರ್ಥಹಳ್ಳಿಯ ನಿವಾಸಿಯಾಗಿರುವ ಶಾರೀಕ್ ಎಂಬ ವ್ಯಕ್ತಿಯ ಪಾತ್ರ ಇರುವ ಬಗ್ಗೆ ಕಂಡುಬಂದಿದ್ದು, ಹಾಗೂ ಶಾರೀಕ್‌ನ ಸಹಚರರು ಮಾಜ್ ಮತ್ತು ಯಾಸೀನ್ ಎಂದು ತಿಳಿದು ಬಂದಿರುತ್ತದೆ ಎಂದರು.

ಆರೋಪಿಗಳಾದ ಶಾರೀಕ್, ವಾಜ್ ಮತ್ತು ಸೈಯ್ಯದ್ ಯಾಸೀನ್ ಅವರ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಮತ್ತು ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು. ಶಾರೀಕ್ 2020 ರಲ್ಲಿ ಮಂಗಳೂರಿನ ಗೋಡೆ ಬರಹದ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದು, ದಸ್ತಗಿರಿಯಾಗಿ ಸುಮಾರು 8 ತಿಂಗಳವರೆಗೆ ಜೈಲಿನಲ್ಲಿ ಇದ್ದು ಫೆಬ್ರವರಿ 2021 ಬಿಡುಗಡೆಯಾಗಿರುತ್ತಾನೆ.

ಸದರಿ ದೊಡ್ಡಪೇಟೆಯ ತನಿಖಾಧಿಕಾರಿಯವರ ವರದಿ ಮತ್ತು ಪಿರ್ಯಾದಿ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಿಷೇಧಿತ ಉಗ್ರ ಸಂಘಟನೆ ಇಸ್ಲಾಂಮಿಕ್ ಸ್ಟೇಟ್(ಐ.ಎಸ್.ಐ.ಎಸ್) ಭಯೋತ್ಪಾದಕ ಕೃತ್ಯಗಳನ್ನು ಮುಂದುವರಿಸುವ ಸಲುವಾಗಿ ಒಳಸಂಚು ಮಾಡಿಕೊಂಡು, ದೇಶದ ಐಕ್ಯತೆ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯನ್ನುಂಟು ಮಾಡುವುದಕ್ಕಾಗಿ ಕಾನೂನು ಬಾಹಿರವಾಗಿ ಮತ್ತು ಉದ್ದೇಶಪೂರ್ವಕವಾಗಿ ಸಾರ್ವಜನಿಕ ಆಸ್ತಿ ಮತ್ತು ಪ್ರಾಣಕ್ಕೆ ಅಪಾಯವಾಗುವ ಸ್ಫೋಟಕಗಳನ್ನು ಇಟ್ಟುಕೊಂಡಿರುವ ಬಗ್ಗೆ ಹಾಗೂ ಭಾರತದ ರಾಷ್ಟ್ರಧ್ವಜವನ್ನು ಸುಟ್ಟಿರುವ ವಿಷಯವಾಗಿ ಕಾನೂನು ರೀತ್ಯಾ ಪ್ರಕರಣ ದಾಖಲಾಗಿದೆ ಎಂದರು.

ಆರೋಪಿಗಳಾದ ಈ ಮೂವರು ಶಿವಮೊಗ್ಗದ ತುಂಗಾನದಿಯ ದಡದಲ್ಲಿರುವ ಸ್ಥಳೀಯವಾಗಿ ಕೆಮ್ಮನಗುಂಡಿ ಎಂದು ಕರೆಯುವ ಜಾಗದಲ್ಲಿ ತಾವು ತಯಾರಿಸಿದ ಬಾಂಬ್ ಅನ್ನು ಪ್ರಾಯೋಗಿಕವಾಗಿ ಸ್ಫೋಟ ಮಾಡಿರುತ್ತಾರೆ. ಪ್ರಾಯೋಗಿಕವಾಗಿ ಮಾಡಿರುವ ಸ್ಫೋಟವು ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಸ್ಪೋಟಿಸಲು ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿ ಇಟ್ಟಿರುತ್ತಾರೆ. ಸ್ವಾತಂತ್ರ್ಯ ದಿನಾಚರಣೆಯ ನಂತರದ ದಿನಗಳಲ್ಲಿ ಭಾರತ ದೇಶದ ರಾಷ್ಟ್ರ ಧ್ವಜವನ್ನು ಬಾಂಬ್ ಸಿಡಿಸಿದ ಜಾಗದ ಹತ್ತಿರ ಸುಟ್ಟು ಹಾಕಿ ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿರುತ್ತಾರೆ. ಅಲ್ಲದೆ ಬಾಂಬ್ ತಯಾರಿಸಲು ಬೇಕಾದ ಹಣವನ್ನು ಸಾರೀಕ್ ಆನ್‌ಲೈನ್ ಮುಖಾಂತರ ಯಾಸಿಸ್‌ಗೆ ಕಳುಹಿಸಿರುತ್ತಾನೆ ಎಂದು ತಿಳಿಸಿದರು.

ಉಗ್ರ ಸಂಘಟನೆ ಇಸ್ಲಾಂಮಿಕ್ ಸ್ಟೇಟ್ (ಐ.ಎಸ್.ಐ.ಎಸ್) ನ ಭಯೋತ್ಪಾದಕ ಕೃತ್ಯಗಳನ್ನು ಮುಂದುವರೆಸಲು ಆರೋಪಿಗಳು ಯೋಜಿಸಿದ್ದು, ಸ್ಫೋಟಕಗಳನ್ನು ತಯಾರಿಸಲು ಬೇಕಾದ ಸಾಮಾಗ್ರಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುತ್ತಾರೆ ಎಂದು ಎಸ್.ಪಿ. ಮಾಹಿತಿ ನೀಡಿದರು. ಆರೋಪಿತರು ತಮ್ಮ ಮೊಬೈಲ್ ಗಳಲ್ಲಿ ಟೆಲಿಗ್ರಾಂ ಆಪ್ ಹೊಂದಿದ್ದರು. ಇಸ್ಲಾಂಮಿಕ್ ಸ್ಟೇಟ್ (ಐ.ಎಸ್.ಐ.ಎಸ್) ಇದರ ಅಧಿಕೃತ ಮಾದ್ಯಮವಾದ ಆಲ್-ಹಯತ್ ನ ಟೆಲಿಗ್ರಾಂ ಚಾನಲ್ ನ ಸದಸ್ಯರಾಗಿದ್ದರು.*

ಅಲ್-ಹಯತ್ ನಿಂದ ಐಸಿಎಸ್ ರವರ ಬಹಳಷ್ಟು ಪ್ರಚಾರಕ್ಕೆ ಸಂಬಂಧಿಸಿದ ಸಾಮಾಗ್ರಿಗಳನ್ನು ಆರೋಪಿತರು ಸ್ವೀಕರಿಸುತ್ತಿದ್ದರು. ಶಾರೀಕ್ ಎಂಬಾತನ ಹಂಚಿಕೊಂಡ ಪಿ.ಡಿ.ಎಫ್, ಫೈಲ್ಗಳ ಮತ್ತು ವಿಡಿಯೋಗಳಲ್ಲಿ ಬಾಂಬ್ ತಯಾರು ಮಾಡುವ ವಿಧಾನ ತಿಳಿದುಕೊಂಡು ಅದಕ್ಕೆ ಬೇಕಾಗಿರುವ ಟೈಮರ್, ರೀಲೆ ಸರ್ಕ್ಯೂಟ್‌ಗಳನ್ನು ಅಮೇಜಾನ್ನ ಮುಖಾಂತರ ಖರಿದಿಸಿದ್ದು, ಶಿವಮೊಗ್ಗದಲ್ಲಿ 9 ವೋಲ್ಟ್ ನ ಎರಡು ಬ್ಯಾಟರಿ, ಸ್ವಿಚ್, ವೈರ್, ಮ್ಯಾಚ್ ಬಾಕ್ಸ್ ಹಾಗು ಇತರೆ ಸ್ಫೋಟಕ ವಸ್ತುಗಳನ್ನು ಖರಿದಿಸಿ ಬಾಂಬ್‌ನ್ನು ತಯಾರು ಮಾಡಿರುತ್ತಾರೆ ಎಂದರು.

ಪ್ರಕರಣದ ಮೂರು ಜನ ಆರೋಪಿತರ ಮತ್ತು ಅವರ ಸಂಬಂದಿಕರ ಮನೆಗಳನ್ನು ಸೇರಿದಂತೆ ಶಿವಮೊಗ್ಗ ನಗರ, ಮಂಗಳೂರು ನಗರ ಹಾಗು ತೀರ್ಥಹಳ್ಳಿಯಲ್ಲಿ ಒಟ್ಟು 11 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧಿಸಿ ಹಲವಾರು ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. 14 ಮೊಬೈಲ್ ಮತ್ತು 1 ಡಾಂಗಲ್, 2 ಲ್ಯಾಪ್‌ಟಾಪ್, 1 ಪೆನ್‌ಡ್ರೈವ್ ಹಾಗೂ ಇತರೆ ಎಲೆಕ್ಟ್ರಾನಿಕ್ಸ್ ಗ್ಯಾಡ್, ಬಾಂಬ್ ಸ್ಫೋಟ ಮಾಡಿದ ಸ್ಥಳದಲ್ಲಿ ದೊರಕಿದ ಛಿದ್ರಗೊಂಡ ಬಾಂಬ್ ಅವಶೇಷ, ಬಾಂಬ್ ತಯಾರಿಸಲು ಬೇಕಾದ ಸಾಮಗ್ರಿ ರಿಲೆ ಸರ್ಕಿಟ್, ಬಲ್ಸ್, ಮ್ಯಾಚ್ ಬಾಕ್ಸ್, ಪೈ, ಬಾಟರಿ, ಸ್ಫೋಟಕ ವಸ್ತು ಇತ್ಯಾದಿ ಅರೆಬರೆ ಸುಟ್ಟಿರುವ ಭಾರತದ ತ್ರಿವರ್ಣ ರಾಷ್ಟ್ರ ದ್ವಜ, ದಾಖಲಾತಿ ಆರೋಪಿತ ಶಾರೀಕ್ ಎಂಬಾತ ಕೃತ್ಯಕ್ಕೆ ಬಳಸಿದ್ದ ಒಂದು ಮಾರುತಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಿಂದ ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದರು.

Edited By : Nagesh Gaonkar
PublicNext

PublicNext

23/09/2022 09:37 pm

Cinque Terre

23.48 K

Cinque Terre

0