ಶಿವಮೊಗ್ಗ : ವಿಶ್ವ ಮೆಚ್ಚಿದ ನಾಯಕ ಹಾಗೂ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆಯನ್ನು ವೈಭವಯುತವಾಗಿ ಆಚರಣೆ ಮಾಡದೆ ಸಮಾಜ ಸೇವೆ ಮಾಡುವುದರ ಮೂಲಕ ಮಾದರಿ ಕಾರ್ಯ ನಡೆಸಲು ಬಿಜೆಪಿ ಮುಂದಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಮೋದಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ಶಿವಮೊಗ್ಗ ಘಟಕ ವತಿಯಿಂದ ಇಂದು ಆಯೋಜಿಸಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ವಿಶ್ವನಾಯಕರಾಗಿರುವ ಮೋದಿ ಅವರ ಜನ್ಮ ದಿನವನ್ನು ವೈಭವದಿಂದ ಆಚರಣೆ ಮಾಡಲು ಅನೇಕರು ಪ್ರಯತ್ನ ಮಾಡಬಹುದು.
ಇತ್ತೀಚೆಗೆ ಮಾಜಿ ಸಿಎಂ ಸಿದ್ಧರಾಮಯ್ಯ ಸುಮಾರು75 ಕೋಟಿ ರೂ. ಖರ್ಚು ಮಾಡಿ ಜನ್ಮದಿನವನ್ನು ಆಚರಣೆ ಮಾಡಿಕೊಂಡಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ಆಡಂಬರವಾಗಿ ಆಚರಣೆ ಮಾಡದೆ, ಬಡವರಿಗೆ ಅನುಕೂಲವಾಗುವಂತೆ ಕಾರ್ಯಕ್ರಮ ನೀಡುವುದರ ಮೂಲಕ ಆಚರಣೆ ಮಾಡಲಾಗುತ್ತಿದೆ. ಜನರ ಸೇವೆಗೆ ಬಿಜೆಪಿಯ ಪ್ರಥಮ ಆದ್ಯತೆಯಾಗಿದೆ ಎಂದರು.
ಜನ್ಮದಿನದ ಪ್ರಯುಕ್ತ ಪಾಕ್ಷಿಕ ಪೂರ್ಣ ಸಮಾಜಸೇವೆ ಮಾಡುವ ದಿಕ್ಕಿನಲ್ಲಿರಬಹುದು, ರಕ್ತದಾನ ಶಿಬಿರ ನಡೆಸುವುದು, ಆರೋಗ್ಯ ಶಿಬಿರ ಇರಬಹುದು, ಕೊಳಗೇರಿಯಲ್ಲಿ ವಾಸ ಮಾಡುತ್ತಿರುವವರಿರಬಹುದು ಹೀಗೆ ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಬಿಜೆಪಿಯಿಂದ ನಡೆಸಲಾಗುತ್ತಿದೆ ಎಂದು ಹೇಳಿದರು.
ಒಂದುವರೆ ವರ್ಷದಲ್ಲಿ ಲೋಕಸಭೆ ಚುನಾವಣೆ ಎದುರಾಗಲಿದೆ. ಕಾಂಗ್ರೆಸ್ ನ ಸ್ಥಿತಿ ಗಮನಿಸಿದ್ದೀರಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ ಸಿದ್ದರಾಮಯ್ಯಗೂ ಗೊತ್ತಾಗದ ರೀತಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸುತ್ತೇನೆ ಎಂದಿದ್ದಾರೆ. ಇದು ಕಾಂಗ್ರೆಸ್ನ ವಿಚಿತ್ರ ಪರಿಸ್ಥಿತಿ. ಕಾಂಗ್ರೆಸ್ ನಲ್ಲಿ ಎಂಎಲ್ಎ, ಮಂತ್ರಿ, ಮುಖ್ಯಮಂತ್ರಿಯನ್ನಾಗಿ ಯಾರನ್ನು ಮಾಡುತ್ತೇವೆ ಎಂದು ಹೇಳುವುದಿಲ್ಲ. ಇದು ಕೇಂದ್ರ ಕಾಂಗ್ರೆಸ್ ನ ನೀತಿ. ಆದರೆ ಭಾರತಿಯ ಜನತಾ ಪಾರ್ಟಿಯಲ್ಲಿ ಹೀಗಿಲ್ಲ.
ಬಿಜೆಪಿಯಲ್ಲಿ ಶಾಸಕರಿಂದ ಹಿಡಿದು ಮಂತ್ರಿ, ಮುಖ್ಯಮಂತ್ರಿ ಪ್ರಧಾನಿವರೆಗೂ ಕೂಡ ಸಂಸದೀಯ ಮಂಡಳಿ ತೀರ್ಮಾನ ಮಾಡುತ್ತದೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಇರುವ ವ್ಯತ್ಯಾಸ ಎಂದರು.
ವೇದಿಕೆಯಲ್ಲಿ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮೇಯರ್ ಸುನಿತಾ ಅಣ್ಣಪ್ಪ, ಪ್ರಮುಖರಾದ ಗಿರೀಶ್ ಪಟೇಲ್, ಜಗದೀಶ್, ಕೆ.ಇ. ಕಾಂತೇಶ್, ಹೃಷಿಕೇಶ್ ಪೈ, ಯುವ ಮೋರ್ಚಾ ನಗರಾಧ್ಯಕ್ಷ ದರ್ಶನ್ ಮತ್ತಿತರರು ಇದ್ದರು.
PublicNext
17/09/2022 04:57 pm