ಶಿವಮೊಗ್ಗ: ಶ್ರೀ ಕ್ಷೇತ್ರ ಸಿಗಂಧೂರಿಗೆ ಬರುವ ಪ್ರವಾಸಿಗರು ಮತ್ತು ಭಕ್ತರಿಗೆ ಬಯಲು ಶೌಚಾಲಯವೇ ಗತಿಯಾಗಿದೆ. ಹೌದು, ಸಿಂಗದೂರಿಗೆ ಬರುವ ಪ್ರವಾಸಿಗರು, ಶೌಚಕ್ಕೆ ಪರದಾಡುವಂತಾಗಿದೆ. ಶಿವಮೊಗ್ಗ ಜಿಲ್ಲಾಡಳಿತ, ಇಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇಲ್ಲಿನ ವಾಹನ ನಿಲುಗಡೆ ಪ್ರದೇಶಕ್ಕೆ ಶೌಚಾಲಯ ಅಗತ್ಯವಿದ್ದು, ಇದಕ್ಕೆ ಜಿಲ್ಲಾಡಳಿತ ಹಸಿರು ನಿಶಾನೆ ತೋರಬೇಕಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕೋಳೂರು ಗ್ರಾ. ಪಂ. ವ್ಯಾಪ್ತಿಯಲ್ಲಿರುವ ಕಳಸವಳ್ಳಿ ಲಾಂಚ್ (ಹೊಳೆಬಾಗಿಲು ಲಾಂಚ್) ಬಳಿಯಿರುವ ವಾಹನ ನಿಲುಗಡೆ ಇರುವ ಪ್ರದೇಶದಲ್ಲಿ, ಶೌಚಾಲಯ ನಿರ್ಮಾಣದ ಅವಶ್ಯಕತೆ ಇದ್ದು, ತಾತ್ಕಾಲಿಕವಾಗಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದ್ದ ಕೋಳೂರು ಗ್ರಾಪಂಯ ಕಾಮಗಾರಿಗೆ ಅರಣ್ಯ ಇಲಾಖೆ ತಡೆಯೊಡ್ಡಿದೆ. ವನ್ಯಜೀವಿ ಅರಣ್ಯ ಪ್ರದೇಶ ಎಂಬ ಕಾರಣಕ್ಕೆ ತಡೆಯೊಡ್ಡಲಾಗಿದ್ದು, ಮಹಿಳೆಯರಿಗೇ ಬಯಲು ಶೌಚಾಲಯವೇ ಗತಿ ಎಂಬಂತಾಗಿದೆ. ವನ್ಯಜೀವಿ ಪ್ರದೇಶವಾದ್ದರಿಂದ ಇಲ್ಲಿ ಯಾವುದೇ, ಕಟ್ಟಡಗಳಾಗಲೀ, ಇತರೆ ಕಾಮಗಾರಿಗಳು ನಡೆಸುವಂತಿಲ್ಲ.
ಸಿಗಂದೂರು ದೇವಾಲಯಕ್ಕೆ ದೇಶ ವಿದೇಶದಿಂದ ಭಕ್ತರು ಆಗಮಿಸುತ್ತಾರೆ. ಇಲ್ಲಿ ಬರುವ ಮಹಿಳಾ ಪ್ರವಾಸಿಗರಂತೂ ನರಕ ಯಾತನೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಜಿಲ್ಲಾಡಳಿತ, ಕೂಡಲೇ ಈ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂಬುದು, ಪ್ರವಾಸಿಗರ ಮತ್ತು ಭಕ್ತರ ಒತ್ತಾಯವಾಗಿದೆ.
PublicNext
05/10/2022 11:18 am