ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ನಾಯಿಗಳನ್ನ ಸಾಕುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ನಾವು ಸಾಕಿರೋ ನಾಯಿ ಬೇರೆ ಯಾವ ನಾಯಿಗಳಿಗಿಂತಲೂ ಕಡಿಮೆ ಇರಬಾರದು ಎಂಬುದು ನಾಯಿ ಸಾಕಿದ ಪ್ರತಿಯೊಬ್ಬರ ಆಸೆ. ಅದೇ ನಾಯಿಯನ್ನ ಸಾರ್ವಜನಿಕರ ಎದುರು ಪ್ರದರ್ಶನ ಮಾಡೋದು ಕೂಡ ಅವರಿಗೆ ಹೆಮ್ಮೆಯ ವಿಚಾರ.
ಹೀಗೆ ವಿವಿಧ ತಳಿಯ ಶ್ವಾನಗಳನ್ನು ಇಂದು ನಾಡಹಬ್ಬ ದಸರಾ ಅಂಗವಾಗಿ ಶಿವಮೊಗ್ಗದಲ್ಲಿ ಪ್ರದರ್ಶನ ಮಾಡಲಾಯಿತು. ಶಿವಮೊಗ್ಗದ ಗಾಂಧಿ ಉದ್ಯಾನವನದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿದ ಶ್ವಾನ ಪ್ರದರ್ಶನ ನೋಡುಗರ ಹುಬ್ಬೇರಿಸುವಂತೆ ಮಾಡಿದ್ದು ಸುಳ್ಳಲ್ಲ.
ಇಲ್ಲಿನ ಪ್ರತಿ ನಾಯಿಯನ್ನ ನೋಡಿದಾಕ್ಷಣ, ಇವು ನಿಜವಾದ ಶ್ವಾನಗಳೋ ಅಥವಾ ಬೇರೆ ಪ್ರಾಣಿಯೋ ಎಂಬ ಅನುಮಾನ ಹಲವರದ್ದು. ಕಾರಣ ಶ್ವಾನಗಳ ವಿವಿಧ ತಳಿಗಳು. ಕಣ್ಣಾಡಿಸಿದಲ್ಲೆಲ್ಲ ಕಾಣಿಸುತ್ತಿದ್ದ ವಿವಿಧ ತಳಿಯ ಶ್ವಾನಗಳು ನೋಡುಗರನ್ನು ಅತ್ಯಚ್ಚರಿಗೆ ದೂಡಿದವು.
ರಾಟ್ ವಿಲ್ಲರ್, ಜರ್ಮನ್ ಶೆಫರ್ಡ್, ಲ್ಯಾಬ್ರಡರ್, ಪಗ್, ಡ್ಯಾಷ್ ಹೌಂಡ್, ಪೊಮೆರಿಯನ್, ಬಾಕ್ಸರ್, ಗೋಲ್ಡನ್ ರಿಟ್ರಿವರ್ ಸೇರಿದಂತೆ ಹೀಗೆ ನಾನಾ ತಳಿಯ ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅದರಲ್ಲೂ 10 ಕೋಟಿ ರೂಪಾಯಿಯದ್ದು ಎಂದು ಹೇಳಲಾಗುವ ಟಿಬೆಟಿಯನ್ ಮಾಸ್ಟಿಫ್ ಶ್ವಾನ ಎಲ್ಲರ ಗಮನ ಸೆಳೆಯಿತು.
ಸಕಲ ತಯಾರಿಯೊಂದಿಗೆ ಬಂದಿದ್ದ ಶ್ವಾನ ವೈವಿಧ್ಯತೆ ಪ್ರತಿಯೊಬ್ಬರನ್ನೂ ಆಕರ್ಷಿಸಿದವು. ನೋಡಲು ಚಿತ್ರ ವಿಚಿತ್ರ ಹಾಗೂ ಸುಂದರವಾಗಿದ್ದ ಸುಮಾರು 45 ಬಗೆಯ ತಳಿಗಳ ಶ್ವಾನಗಳು ಕಣ್ಮನ ಸೆಳೆದವು.
PublicNext
02/10/2022 08:34 pm